ದೆಹಲಿ- ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ನಡೆಯುತ್ತಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದ ಅರ್ಹ ನಾಗರಿಕರಿಗಾಗಿ ಭಾರತೀಯ ಚುನಾವಣಾ ಆಯೋಗವು (ECI) ಸೆಪ್ಟೆಂಬರ್ 27 ರಂದು ದೆಹಲಿಯಾದ್ಯಂತ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ‘ವಿಶೇಷ ನೋಂದಣಿ ಶಿಬಿರ’ಗಳನ್ನು ಆಯೋಜಿಸಿದೆ.
ಕಳೆದ ಸೆಪ್ಟೆಂಬರ್ 20 ರಂದು ನಡೆದ ಮೊದಲ ಹಂತದ ಶಿಬಿರದ ಯಶಸ್ಸಿನ ಬಳಿಕ, ಕರಡು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ನಾಗರಿಕರಿಗೆ ಮತ್ತೊಂದು ಅವಕಾಶ ನೀಡಲು ಸಿಇಒ (ಮುಖ್ಯ ಚುನಾವಣಾಧಿಕಾರಿ) ಕಚೇರಿ ಈ ನಿರ್ಧಾರ ತಳೆದಿದೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 24 ರ ಅವಧಿಯಲ್ಲಿ ಹೆಸರು ಸೇರ್ಪಡೆಗಾಗಿ ಈಗಾಗಲೇ 1,21,224 ನಮೂನೆ-6 ಅರ್ಜಿಗಳು ಸ್ವೀಕೃತವಾಗಿವೆ.
ಯುವ ಮತದಾರರನ್ನು ತಲುಪುವ ಉದ್ದೇಶದಿಂದ ಸೆಪ್ಟೆಂಬರ್ 29 ಮತ್ತು 30 ರಂದು ದೆಹಲಿಯ ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ 18 ರಿಂದ 25 ವರ್ಷ ವಯಸ್ಸಿನವರಿಗಾಗಿ ವಿಶೇಷ ಶಿಬಿರಗಳನ್ನು ನಡೆಸಲಾಗುವುದು. ಅಕ್ಟೋಬರ್ 1, 2026 ಕ್ಕೆ 18 ವರ್ಷ ಪೂರೈಸುವ ಅರ್ಹ ಯುವಕರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ರಾಜಕೀಯ ಪ್ರತಿಕ್ರಿಯೆ
ಮತದಾರರ ದತ್ತಾಂಶ ಪ್ರವೇಶ ಹಾಗೂ ಪರಿಷ್ಕರಣೆ ವಿಚಾರದಲ್ಲಿ ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳ ವರದಿ ಹೊರಬಿದ್ದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಕಾವು ಏರಿದೆ. ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು 48 ಗಂಟೆಗಳ ಒಳಗೆ (ಶನಿವಾರದೊಳಗೆ) ರಾಜೀನಾಮೆ ನೀಡದಿದ್ದರೆ, ಅಕ್ಟೋಬರ್ 2 (ಗಾಂಧಿ ಜಯಂತಿ) ರಿಂದ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ವಿರೋಧ ಪಕ್ಷಗಳೂ ಕೂಡ ಆಯೋಗದ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತಿವೆ.
ಅರ್ಜಿಗಳು ಮತ್ತು ವೆಳೆಯಾಪಟ್ಟಿ
ಅರ್ಜಿ ಸಲ್ಲಿಕೆ ಮತ್ತು ಅಂತಿಮ ವೇಳಾಪಟ್ಟಿ
ವಿಶೇಷ ಶಿಬಿರ: ಸೆಪ್ಟೆಂಬರ್ 27 (ಎಲ್ಲಾ ಮತಗಟ್ಟೆಗಳಲ್ಲಿ)
ಯುವ ಮತದಾರರ ಶಿಬಿರ: ಸೆಪ್ಟೆಂಬರ್ 29 ಮತ್ತು 30 (ಕಾಲೇಜುಗಳಲ್ಲಿ)
ಆಕ್ಷೇಪಣೆ/ಸೇರ್ಪಡೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 30
ಅರ್ಜಿಗಳ ವಿಲೇವಾರಿ: ಅಕ್ಟೋಬರ್ 29 ರೊಳಗೆ
ಅಂತಿಮ ಮತದಾರರ ಪಟ್ಟಿ ಪ್ರಕಟಣೆ: ನವೆಂಬರ್ 4, 2026
ಅರ್ಹ ನಾಗರಿಕರು ERO, AERO, BLO ಗಳ ಬಳಿ ಭೌತಿಕವಾಗಿ ಅಥವಾ ಮತದಾರರ ಸೇವೆಗಳ ಪೋರ್ಟಲ್ ಹಾಗೂ ‘ECINET’ ಮೊಬೈಲ್ ಆಪ್ ಮೂಲಕ ಆನ್‌ಲೈನ್‌ನಲ್ಲಿ ನಮೂನೆ (Form 6, 6A, 7, 8) ಸಲ್ಲಿಸಬಹುದು. ಸಾರ್ವಜನಿಕರು ಕರಡು ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಿಕೊಳ್ಳುವಂತೆ ದೆಹಲಿ ಸಿಇಒ ಮನವಿ ಮಾಡಿದ್ದಾರೆ.

