ಬೆಂಗಳೂರು: ಸಿಗ್ನಲ್ ನಲ್ಲಿ ನಿಂತಿದ್ದ ಆಟೋಗೆ ಅತಿ ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಿಂಗಯ್ಯನಪಾಳ್ಯ ನಿವಾಸಿ ಕೃಷ್ಣಮೂರ್ತಿ(60) ಮೃತಪಟ್ಟವರು ಎಂದು ಹೇಳಲಾಗಿದೆ. ಕೆಆರ್ ಸರ್ಕಲ್ ನಲ್ಲಿ ಬಸ್ ಆಟೋಗೆ ಡಿಕ್ಕಿ ಹೊಡೆದಿದ್ದು, ಕೂಡಲೇ ಗಾಯಾಳು ಆಟೋ ಚಾಲಕನ ಕೃಷ್ಣಮೂರ್ತಿ ಅವರನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣಮೂರ್ತಿ ಮೃತಪಟ್ಟಿದ್ದಾರೆ.
ಮೆಜೆಸ್ಟಿಕ್ ನಿಂದ ಚಂದಾಪುರಕ್ಕೆ ತೆರಳುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಕೆಆರ್ ಸರ್ಕಲ್ ಬಳಿ ಆಟೋ ಹಿಂಬಾಗಕ್ಕೆ ಡಿಕ್ಕಿ ಹೊಡೆದಿದ್ದು ಡಿಕ್ಕಿ ರಭಸಕ್ಕೆ ಆಟೋ ಪಕ್ಕದಲ್ಲಿ ಚಲಿಸುತ್ತಿದ್ದ ಕಾರ್ ಗೆ ಅಪ್ಪಳಿಸಿದೆ. ನಂತರ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ವಿದ್ಯುತ್ ಕಂಬ ಮತ್ತು ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ಅಪಘಾತದ ಬಳಿಕ ಎಲೆಕ್ಟ್ರಿಕ್ ಬಸ್ ಚಾಲಕ ಬ್ರೇಕ್ ಫೇಲಾಗಿದೆ ಎಂದು ನಾಟಕ ಮಾಡಿದ್ದಾನೆ. ಬಸ್ ಅನ್ನು ಟೋಯಿಂಗ್ ಮಾಡದೆ ಚಾಲನೆ ಮಾಡಿಕೊಂಡೇ ಬಿಎಂಟಿಸಿ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದಾರೆ. ಬಿಎಂಟಿಸಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಆಟೋ ಚಾಲಕ ಕೃಷ್ಣಮೂರ್ತಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

