ಬೆಂಗಳೂರು: ಗುರುದತ್ ಗಾಣಿಗಾ ನಿರ್ದೇಶನದ ಪ್ರಜ್ವಲ್ ದೇವರಾಜ್, ರಾಜ್.ಬಿ.ಶೆಟ್ಟಿ ಅಭಿನಯದ ‘ಕರಾವಳಿ’ ಸಿನಿಮಾ ಆರಂಭದಿಂದಲೂ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇತ್ತು. ಇದೀಗ ಬಿಡುಗಡೆ ಸಮೀಪಿಸುತ್ತಿದ್ದಂತೆ ವಿವಾದ ಮತ್ತಷ್ಟು ಹೆಚ್ಚಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಮಾಡಿದ ಗಲಾಟೆ ಹಾಗೂ ನಿರ್ದೇಶಕ ಹಾಗೂ ನಿರ್ಮಾಪಕರ ನಡುವೆ ಇದ್ದ ಮನಸ್ಥಾಪ ಬಹಿರಂಗವಾಗಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳು ಮತ್ತಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಎಲ್ಲಾ ಬೆಳವಣಿಗಳ ನಡುವೆ ನಟ, ನಿರ್ದೇಶಕ ರಾಜ್.ಬಿ.ಶೆಟ್ಟಿ ಕ್ಷಮೆ ಕೋರೊದ್ದಾರೆ.
ಕರಾವಳಿ ಸಿನಿಮಾನಲ್ಲಿ ನಟಿಸಿರುವ ರಾಜ್.ಬಿ.ಶೆಟ್ಟಿ ಸಾಮಾಜಿಕ ಜಾಲತಾಣಗಾಳಲ್ಲಿ ವಿಡಿಯೋ ಹಂಚಿಕೊಂಡು ಆಗಿರುವ ವಿವಾದಕ್ಕೆ ಕ್ಷಮೆ ಕೋರಿದ್ದಾರೆ. ‘ಕೆಜಿಎಫ್’, ‘ಕಾಂತಾರ’ ಅಂಥಹಾ ಸಿನಿಮಾಗಳು ಯಶಸ್ವಿಯಾದಾಗ ನಮ್ಮ ಕನ್ನಡದ ಸಿನಿಮಾ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಹಾಗೆಯೇ ಈ ರೀತಿ ವಿವಾದಗಳು ನಡೆದಾಗಲೂ ಸಹ ಮನಸ್ಸಿಗೆ ಬಹಳ ಬೇಸರ ಆಗುತ್ತದೆ, ನೋವನ್ನು ಅನುಭವಿಸುತ್ತೇವೆ ಎಂದಿದ್ದಾರೆ.
ಇಲ್ಲಿ ಯಾರು ಸರಿ, ಯಾರು ತಪ್ಪು ಎಂಬುದು ಮುಖ್ಯವಲ್ಲ, ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ನಾವು ಹೀಗೆ ನಡೆದುಕೊಳ್ಳುತ್ತಿದ್ದೇವಲ್ಲ ಎಂಬುದು ಬೇಜಾರು ಕೊಡುವ ಸಂಗತಿ. ಚಿತ್ರರಂಗದವನಾಗಿ ನಾನು ಇಡೀ ಪ್ರೇಕ್ಷಕರ ವರ್ಗಕ್ಕೆ ದೊಡ್ಡ ಕ್ಷಮೆ ಕೇಳುತ್ತೇನೆ. ಮುಂದೆ ಹೀಗೆ ನಡೆಯದಂತೆ ನೋಡಿಕೊಳ್ಳುವ, ವರ್ತಿಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
‘ಕರಾವಳಿ’ ಸಿನಿಮಾನಲ್ಲಿ ಪ್ರಜ್ವಲ್ ದೇವರಾಜ್ ಅವರು ನಾಯಕ, ನನ್ನದು ಅತಿಥಿ ಪಾತ್ರ. ಆದರೆ ಬಹಳ ಮುಖ್ಯವಾದ ಅತಿಥಿ ಪಾತ್ರ. ನಾವು ಮಾತ್ರವೇ ಅಲ್ಲದೆ ಹಲವು ಪ್ರತಿಭಾವಂತ ನಟ-ನಟಿಯರು ಸಿನಿಮಾನಲ್ಲಿ ಇದ್ದಾರೆ. ಸಂಪದಾ, ಮಿತ್ರ, ರಮೇಶ್ ಇಂದಿರಾ ಇನ್ನೂ ಕೆಲವರು ಸಿನಿಮಾನಲ್ಲಿದ್ದಾರೆ. ಒಂದು ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಪ್ರಾಮಾಣಿಕ ಪ್ರಯತ್ನವನ್ನು ನಿರ್ದೇಶಕ ಗುರುದತ್ ಗಾಣಿಗಾ ಮಾಡಿದ್ದಾರೆ ಎಂದು ಹೇಳಿದ್ದಾರೆ.

