ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ (PM Vidyalaxmi) ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯನ್ನು ನವೆಂಬರ್ 2024ರಲ್ಲಿ ಆರಂಭಿಸಲಾಗಿದ್ದು, ಯಾವುದೇ ಜಾಮೀನು (Collateral) ಅಥವಾ ಗ್ಯಾರಂಟಿ ಇಲ್ಲದೆ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲ ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ದೇಶದಾದ್ಯಂತ ಇರುವ 860 ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಈ ಯೋಜನೆ ಅನ್ವಯಿಸುತ್ತದೆ. ಸರ್ಕಾರದ ಮಾಹಿತಿ ಪ್ರಕಾರ, ಪ್ರತಿ ವರ್ಷ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದು, ಇವರಲ್ಲಿ ಸುಮಾರು 7 ಲಕ್ಷ ಹೊಸ ವಿದ್ಯಾರ್ಥಿಗಳಿದ್ದಾರೆ. ₹10 ಲಕ್ಷದವರೆಗೆ ಸಾಲದ ಮೇಲೆ 3% ಬಡ್ಡಿ ಸಬ್ಸಿಡಿ ನೀಡಲಾಗುತ್ತಿದೆ.
ಯಾರಿಗೆ ಅರ್ಹತೆ?
- ಮೆರಿಟ್ ಅಥವಾ ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ಅರ್ಹ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ಪದವಿ (Degree) ಮತ್ತು ಡಿಪ್ಲೊಮಾ (Diploma) ಕೋರ್ಸ್ಗಳಿಗೆ ಮಾತ್ರ ಯೋಜನೆ ಅನ್ವಯಿಸುತ್ತದೆ.
- ಎಲ್ಲಾ ಆದಾಯ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
- ಮೆರಿಟ್ ಅಥವಾ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ಪಡೆದಿರಬೇಕು.
- ಮ್ಯಾನೇಜ್ಮೆಂಟ್ ಕೋಟಾ ಅಥವಾ ಇತರೆ ಕೋಟಾದ ಮೂಲಕ ಪ್ರವೇಶ ಪಡೆದವರು ಅರ್ಹರಲ್ಲ.
- ಮಂಜೂರು ಮಾಡುವ ಸಾಲದ ಮೊತ್ತವು ಕೋರ್ಸ್ ಶುಲ್ಕ ಹಾಗೂ ಸಂಬಂಧಿತ ವೆಚ್ಚಗಳ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಈ ಯೋಜನೆಯಡಿ ಕೇಂದ್ರ ಸರ್ಕಾರ ಸಾಲದ ಮೊತ್ತಕ್ಕೆ ಯಾವುದೇ ನಿಗದಿತ ಗರಿಷ್ಠ ಮಿತಿಯನ್ನು ವಿಧಿಸಿಲ್ಲ.
ಯೋಜನೆಯ ಪ್ರಮುಖ ಪ್ರಯೋಜನಗಳು
- ಶಿಕ್ಷಣ ಸಾಲ ಪಡೆಯಲು ಯಾವುದೇ ಜಾಮೀನು ಅಥವಾ ಗ್ಯಾರಂಟಿ ಅಗತ್ಯವಿಲ್ಲ.
- ₹7.5 ಲಕ್ಷದವರೆಗೆ ಶಿಕ್ಷಣ ಸಾಲಕ್ಕೆ ಸರ್ಕಾರ ಬ್ಯಾಂಕ್ಗಳಿಗೆ 75% ಕ್ರೆಡಿಟ್ ಗ್ಯಾರಂಟಿ ನೀಡುತ್ತದೆ.
- ವಾರ್ಷಿಕ ಕುಟುಂಬ ಆದಾಯ ₹4.5 ಲಕ್ಷದವರೆಗೆ ಇರುವ ವಿದ್ಯಾರ್ಥಿಗಳಿಗೆ ಕೋರ್ಸ್ ಅವಧಿಯಲ್ಲಿ 100% ಬಡ್ಡಿ ಸಬ್ಸಿಡಿ ದೊರೆಯುತ್ತದೆ.
- ವಾರ್ಷಿಕ ಕುಟುಂಬ ಆದಾಯ ₹4.5 ಲಕ್ಷದಿಂದ ₹8 ಲಕ್ಷದವರೆಗೆ ಇರುವ ವಿದ್ಯಾರ್ಥಿಗಳಿಗೆ ₹10 ಲಕ್ಷದವರೆಗೆ ಶಿಕ್ಷಣ ಸಾಲದ ಮೇಲೆ 3% ಬಡ್ಡಿ ಸಬ್ಸಿಡಿ ಲಭ್ಯ.
- ಅನುಸೂಚಿತ ವಾಣಿಜ್ಯ ಬ್ಯಾಂಕ್ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಹಾಗೂ ಸಹಕಾರಿ ಬ್ಯಾಂಕ್ಗಳ ಮೂಲಕ ಶಿಕ್ಷಣ ಸಾಲ ಪಡೆಯಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ವಿದ್ಯಾರ್ಥಿಗಳು PM ವಿದ್ಯಾಲಕ್ಷ್ಮಿ ಯುನಿಫೈಡ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು:
- ಹೆಸರು
- ಆಧಾರ್ ಸಂಖ್ಯೆ
- ಇ-ಮೇಲ್ ವಿಳಾಸ
- ಮೊಬೈಲ್ ಸಂಖ್ಯೆ
ಇತ್ಯಾದಿ ಮೂಲಭೂತ ಮಾಹಿತಿಯನ್ನು ನೀಡಿ ನೋಂದಣಿ ಮಾಡಬೇಕು.
ನಂತರ ಲಾಗಿನ್ ಮಾಡಿ:
- ಕೋರ್ಸ್ ವಿವರ
- ಶಿಕ್ಷಣ ಸಂಸ್ಥೆಯ ವಿವರ
- ಸಾಲ ಪಡೆಯಲು ಬಯಸುವ ಬ್ಯಾಂಕ್ ಆಯ್ಕೆ
- ಮಾಡಿ ಅರ್ಜಿಯನ್ನು ಸಲ್ಲಿಸಬಹುದು. ಇದೇ ಪೋರ್ಟಲ್ ಮೂಲಕ ಅರ್ಜಿಯ ಸ್ಥಿತಿಯನ್ನು (Application Status) ಕೂಡ ಪರಿಶೀಲಿಸಬಹುದು.

