ನವದೆಹಲಿ : 2020ರ ದೆಹಲಿ ಗಲಭೆಗಳ ವೇಳೆ ಹತ್ಯೆಯಾದ ಗುಪ್ತಚರ ದಳ (ಐಬಿ) ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದಲ್ಲಿ, ಸುಮಾರು ಆರು ವರ್ಷಗಳ ಬಳಿಕ ದೆಹಲಿಯ ಕರ್ಕರ್ದೂಮಾ ನ್ಯಾಯಾಲಯವು ಮಾಜಿ ಎಎಪಿ ಕೌನ್ಸಿಲರ್ ತಾಹಿರ್ ಹುಸೇನ್ ಸೇರಿದಂತೆ ಐವರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಈ ತೀರ್ಪು ಅಂಕಿತ್ ಶರ್ಮಾ ಕುಟುಂಬಕ್ಕೆ ನ್ಯಾಯ ಸಿಕ್ಕಿದ ಭಾವನೆ ಮೂಡಿಸಿದರೂ, ಆ ಭೀಕರ ಘಟನೆಯ ನೆನಪುಗಳನ್ನು ಮತ್ತೆ ಜೀವಂತಗೊಳಿಸಿದೆ.
2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರದ ವೇಳೆ ಅಂಕಿತ್ ಶರ್ಮಾ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ತಲೆಗೆ ಸೇರಿದಂತೆ ದೇಹದ ಹಲವು ಭಾಗಗಳಿಗೆ ಚೂಪಾದ ಮತ್ತು ಭಾರವಾದ ಆಯುಧಗಳಿಂದ ಗಾಯಗಳಾಗಿದ್ದ ಅವರು ಮೃತಪಟ್ಟಿದ್ದರು. ಬಳಿಕ ಅವರ ಮೃತದೇಹ ಚಾಂದ್ ಬಾಗ್ ಪ್ರದೇಶದ ಒಳಚರಂಡಿಯಲ್ಲಿ ಪತ್ತೆಯಾಗಿತ್ತು.
“ದೇಶ ಸೇವೆ ಮಾಡುತ್ತಿದ್ದ ನನ್ನ ಸಹೋದರನನ್ನು ಕೊಂದರು”
ಅಂಕಿತ್ ಶರ್ಮಾ ಅವರ ಸಹೋದರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ನನ್ನ ಸಹೋದರ ದೇಶದ ಸೇವೆಯಲ್ಲಿ ನಿರತರಾಗಿದ್ದರು. ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಕ್ರೂರವಾಗಿ ಹತ್ಯೆಗೀಡಾದರು. ಗುಪ್ತಚರ ಇಲಾಖೆಯ ಅಧಿಕಾರಿಗಳು ತಮ್ಮ ಗುರುತನ್ನು ಬಹಿರಂಗಪಡಿಸುವುದಿಲ್ಲ. ಆದ್ದರಿಂದ ಅವರು ತಮಗೆ ದೆಹಲಿ ಪೊಲೀಸ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದರು” ಎಂದು ಹೇಳಿದರು.
ಅವರು ಮುಂದುವರೆದು, “ಮೇಲಾಧಿಕಾರಿಗಳ ಸೂಚನೆಯಂತೆ ಪರಿಸ್ಥಿತಿಯನ್ನು ಪರಿಶೀಲಿಸಲು ತೆರಳಿದ್ದರು. ಅವರು ತಮ್ಮ ಕರ್ತವ್ಯವನ್ನಷ್ಟೇ ನಿರ್ವಹಿಸುತ್ತಿದ್ದರು. ನಮ್ಮ ನಂಬಿಕೆಯಂತೆ ಅವರನ್ನು ಅವರ ಧರ್ಮದ ಕಾರಣಕ್ಕಾಗಿ ಗುರಿಯಾಗಿಸಲಾಯಿತು. ಆ ನೋವು ಇಂದಿಗೂ ನಮ್ಮ ಕುಟುಂಬವನ್ನು ಕಾಡುತ್ತಿದೆ” ಎಂದರು.
ದೇಹದ ಮೇಲೆ ಆಸಿಡ್ ಗುರುತುಗಳು, ಅನೇಕ ಚೂರಿ ಇರಿತಗಳು
ಅಂಕಿತ್ ಅವರ ಸಾವಿನ ಕ್ರೌರ್ಯವನ್ನು ನೆನಪಿಸಿಕೊಂಡ ಸಹೋದರ, “ಅವರ ಮುಖ, ಎದೆ ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಆಸಿಡ್‌ನ ಗುರುತುಗಳಿದ್ದವು. ದೇಹದಾದ್ಯಂತ ಅನೇಕ ಚೂರಿ ಇರಿತಗಳಿದ್ದವು. ಅವರು ಅನುಭವಿಸಿದ ಹಿಂಸೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ” ಎಂದು ಭಾವುಕರಾದರು.
“ಯಾವ ತೀರ್ಪೂ ನಮ್ಮ ಮಗನನ್ನು ಮರಳಿ ತರಲಾರದು”
ನ್ಯಾಯಾಲಯದ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಕುಟುಂಬ, “ಈ ತೀರ್ಪಿನಿಂದ ನ್ಯಾಯ ಸಿಕ್ಕಿದೆ ಎನ್ನುವ ಭಾವನೆ ಇದ್ದರೂ, ನಮ್ಮ ಕುಟುಂಬದ ಪ್ರಮುಖ ಆಧಾರಸ್ತಂಭನನ್ನು ಕಳೆದುಕೊಂಡ ನೋವು ಎಂದಿಗೂ ಮರೆಯಾಗುವುದಿಲ್ಲ. ಯಾವುದೇ ತೀರ್ಪು ನಮ್ಮ ಮಗನನ್ನು ಮರಳಿ ತರಲು ಸಾಧ್ಯವಿಲ್ಲ” ಎಂದು ಹೇಳಿದೆ.
ದೆಹಲಿ ತೊರೆದು ಉತ್ತರ ಪ್ರದೇಶಕ್ಕೆ ಸ್ಥಳಾಂತರ
ಅಂಕಿತ್ ಶರ್ಮಾ ಹತ್ಯೆಯ ಬಳಿಕ ಕುಟುಂಬವು ದೆಹಲಿಯನ್ನು ತೊರೆದು ಉತ್ತರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ.”ಘಟನೆಯಾದ ಎರಡು-ಮೂರು ತಿಂಗಳಲ್ಲೇ ದೆಹಲಿಯನ್ನು ಬಿಟ್ಟು ಬಂದೆವು. ಅಲ್ಲಿರುವುದು ಸುರಕ್ಷಿತವೆನಿಸಲಿಲ್ಲ. ನಮ್ಮ ಜೀವನ ಸಂಪೂರ್ಣ ಬದಲಾಗಿದೆ. ಭಯದ ನೆರಳು ಇನ್ನೂ ನಮ್ಮನ್ನು ಬಿಡಲಿಲ್ಲ” ಎಂದು ಸಹೋದರ ತಿಳಿಸಿದ್ದಾರೆ.
“ಕಠಿಣ ಶಿಕ್ಷೆ ವಿಧಿಸಬೇಕು”
ಅಂಕಿತ್ ಶರ್ಮಾ ಅವರ ತಂದೆ ರವೀಂದರ್ ಕುಮಾರ್, “ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಅಥವಾ ಕಾನೂನಿನಡಿ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ಸತ್ಯಕ್ಕಾಗಿ ನಾನು ಹಲವು ವರ್ಷಗಳ ಕಾಲ ನ್ಯಾಯಾಲಯಕ್ಕೆ ಹಾಜರಾಗಿ ಹೋರಾಡಿದ್ದೇನೆ” ಎಂದು ಹೇಳಿದ್ದಾರೆ.ಕುಟುಂಬದ ಸದಸ್ಯರು, “ಇದುವರೆಗೆ ಕೆಲವರಿಗೆ ಮಾತ್ರ ಶಿಕ್ಷೆ ವಿಧಿಸಲಾಗಿದೆ. ಈ ಹತ್ಯೆಯಲ್ಲಿ ಭಾಗಿಯಾದ ಪ್ರತಿಯೊಬ್ಬರೂ ಕಾನೂನಿನ ಮುಂದೆ ಉತ್ತರಿಸಬೇಕು” ಎಂದು ಆಗ್ರಹಿಸಿದ್ದಾರೆ.
2020ರ ಫೆಬ್ರವರಿ 25ರಂದು ಏನಾಯಿತು?
ಅಂಕಿತ್ ಶರ್ಮಾ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ದಯಾಲ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಫೆಬ್ರವರಿ 25, 2020ರಂದು ಕೆಲಸ ಮುಗಿಸಿ ಮನೆಗೆ ಬಂದಿದ್ದ ಅಂಕಿತ್ ಶರ್ಮಾ, ಗಲಭೆಯ ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತೆ ಹೊರಗೆ ತೆರಳಿದ್ದರು. ಆದರೆ ಅವರು ಮನೆಗೆ ಮರಳಲಿಲ್ಲ. ನಂತರ ಹುಡುಕಾಟ ನಡೆಸಿದಾಗ, ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿರುವ ಮಾಹಿತಿ ದೊರೆಯಿತು. ಬಳಿಕ ಖಜೂರಿ ಖಾಸ್ ಪ್ರದೇಶದ ಚಾಂದ್ ಬಾಗ್ ಸಮೀಪದ ಒಳಚರಂಡಿಯಲ್ಲಿ ಅವರ ಮೃತದೇಹ ಪತ್ತೆಯಾಯಿತು.
ದೆಹಲಿ ಪೊಲೀಸ್ ಸಲ್ಲಿಸಿದ್ದ ಆರೋಪಪಟ್ಟಿಯ ಪ್ರಕಾರ, ತಾಹಿರ್ ಹುಸೇನ್ ನೇತೃತ್ವದ ಗುಂಪು ಅಂಕಿತ್ ಶರ್ಮಾ ಅವರನ್ನು ತಡೆದು, ಚೂಪಾದ ಹಾಗೂ ಭಾರವಾದ ಆಯುಧಗಳಿಂದ ಹಲ್ಲೆ ನಡೆಸಿ, ಬಳಿಕ ಅವರ ಮೃತದೇಹವನ್ನು ಒಳಚರಂಡಿಗೆ ಎಸೆದಿತ್ತು ಎಂದು ಆರೋಪಿಸಲಾಗಿದೆ.
ನ್ಯಾಯಾಲಯದ ತೀರ್ಪು
ಸೋಮವಾರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರು ತಾಹಿರ್ ಹುಸೇನ್, ನಾಜಿಮ್, ಖಾಸಿಂ, ಜಾವೇದ್ ಹಾಗೂ ಅನಾಸ್ ಅವರನ್ನು ವಿವಿಧ ಆರೋಪಗಳಲ್ಲಿ ತಪ್ಪಿತಸ್ಥರೆಂದು ಘೋಷಿಸಿದರು. ಇನ್ನು ಆರು ಮಂದಿಯನ್ನು ಸಾಕ್ಷ್ಯಾಭಾವದಿಂದ ಖುಲಾಸೆಗೊಳಿಸಲಾಯಿತು.ತೀರ್ಪು ಪ್ರಕಟವಾದ ಬಳಿಕ ತಾಹಿರ್ ಹುಸೇನ್ ನ್ಯಾಯಾಲಯದಲ್ಲೇ ಭಾವುಕರಾಗಿ ಅತ್ತರು. ಅವರನ್ನು ಹೊರಗೆ ಕರೆದುಕೊಂಡು ಹೋಗುವ ವೇಳೆ, “ಇನ್ಸಾಫ್ ಆಗಿಲ್ಲ” ಎಂದು ಪ್ರತಿಕ್ರಿಯಿಸಿದರು.
ದೆಹಲಿ ಗಲಭೆಗಳ ಹಿನ್ನೆಲೆ
2020ರ ಫೆಬ್ರವರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿ ಪ್ರತಿಭಟನೆಗಳ ನಡುವೆಯೇ ಈಶಾನ್ಯ ದೆಹಲಿಯಲ್ಲಿ ಭಾರೀ ಕೋಮು ಹಿಂಸಾಚಾರ ನಡೆದಿತ್ತು. ಕಲ್ಲು ತೂರಾಟ, ಬೆಂಕಿ ಹಚ್ಚುವಿಕೆ ಹಾಗೂ ಧ್ವಂಸಕೃತ್ಯಗಳಿಂದ ಕೂಡಿದ ಈ ಗಲಭೆಗಳಲ್ಲಿ 53 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.

