ಚೆನ್ನೈ: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ, ಚಿತ್ರಕಥೆಗಾರ ಹಾಗೂ ಪ್ರಯೋಗಶೀಲ ಸಿನಿಮಾ ನಿರ್ಮಾತೃ ಸಿಂಗೀತಂ ಶ್ರೀನಿವಾಸ ರಾವ್ ಅವರು ಶನಿವಾರ, ಅಕ್ಟೋಬರ್ 3ರಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಸಿಂಗೀತಂ ಶ್ರೀನಿವಾಸ ರಾವ್ ಅವರು ಭಾರತೀಯ ಚಿತ್ರರಂಗದಲ್ಲಿ ವಿಭಿನ್ನ ಕಥೆ, ಹೊಸ ಪ್ರಯೋಗ ಮತ್ತು ವಿಶಿಷ್ಟ ನಿರೂಪಣಾ ಶೈಲಿಗೆ ಹೆಸರಾಗಿದ್ದರು. ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾಗಳನ್ನು ನಿರ್ದೇಶಿಸಿದ್ದರು.
ಕೆ.ವಿ. ರೆಡ್ಡಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಸಿನಿಪಯಣ ಆರಂಭ
ಸಿಂಗೀತಂ ಅವರು ತಮ್ಮ ಸಿನಿಪಯಣವನ್ನು ಖ್ಯಾತ ನಿರ್ದೇಶಕ ಕೆ.ವಿ. ರೆಡ್ಡಿ ಅವರ ಸಹಾಯಕರಾಗಿ ಆರಂಭಿಸಿದ್ದರು. ಮಾಯಾಬಜಾರ್ ಸೇರಿದಂತೆ ಹಲವು ಪ್ರಮುಖ ಚಿತ್ರಗಳ ನಿರ್ಮಾಣದಲ್ಲಿ ಅವರು ಕೆಲಸ ಮಾಡಿದ್ದರು. ನಂತರ 1972ರಲ್ಲಿ ‘ನೀತಿ ನಿಜಾಯಿತಿ’ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು.
ಪ್ರಯೋಗಶೀಲ ಸಿನಿಮಾಗಳಿಗೆ ಹೆಸರಾಗಿದ್ದ ನಿರ್ದೇಶಕ
ಸಿಂಗೀತಂ ಅವರ ನಿರ್ದೇಶನದ ‘ಪುಷ್ಪಕ ವಿಮಾನ’ಭಾರತೀಯ ಚಿತ್ರರಂಗದ ಅತ್ಯಂತ ವಿಶಿಷ್ಟ ಸಿನಿಮಾಗಳಲ್ಲಿ ಒಂದಾಗಿದೆ. ಕಮಲ್ ಹಾಸನ್ ಅಭಿನಯಿಸಿದ್ದ ಈ ಚಿತ್ರದಲ್ಲಿ ಬಹುತೇಕ ಸಂಭಾಷಣೆಯೇ ಇರಲಿಲ್ಲ. ದೃಶ್ಯಗಳು, ಅಭಿನಯ ಮತ್ತು ಹಾಸ್ಯದ ಮೂಲಕವೇ ಕಥೆಯನ್ನು ಕಟ್ಟಿಕೊಟ್ಟ ಈ ಸಿನಿಮಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿತ್ತು.
ಅದೇ ರೀತಿ ‘ಆದಿತ್ಯ 369’ ಮೂಲಕ ಟೈಮ್ ಟ್ರಾವೆಲ್ ಮತ್ತು ವೈಜ್ಞಾನಿಕ ಕಲ್ಪನೆಯನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದ ಅವರು, ಭೈರವ ದ್ವೀಪಂ ಮೂಲಕ ಫ್ಯಾಂಟಸಿ ಮತ್ತು ಜಾನಪದ ಕಥನದಲ್ಲೂ ತಮ್ಮದೇ ಛಾಪು ಮೂಡಿಸಿದ್ದರು. ಮಯೂರಿ, ಪಂತುಲಮ್ಮ, ಆನಂದ್, ಬ್ರಿಂದಾವನಂ, ಮ್ಯಾಡಂ ಸೇರಿದಂತೆ ಹಲವು ಚಿತ್ರಗಳು ಅವರ ಪ್ರಮುಖ ಕೃತಿಗಳಾಗಿವೆ.
ಡಾ. ರಾಜ್ ಕುಮಾರ್ ಜೊತೆ ಹಲವು ಯಶಸ್ವಿ ಚಿತ್ರಗಳು
ಕನ್ನಡ ಚಿತ್ರರಂಗದಲ್ಲಿಯೂ ಸಿಂಗೀತಂ ಶ್ರೀನಿವಾಸ ರಾವ್ ಅವರ ಕೊಡುಗೆ ಗಮನಾರ್ಹವಾಗಿದೆ. ಡಾ. ರಾಜ್ ಕುಮಾರ್ ಅವರೊಂದಿಗೆ ಹಾಲು ಜೇನು, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಭಾಗ್ಯದ ಲಕ್ಷ್ಮೀ ಬಾರಮ್ಮ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳನ್ನು ನೀಡಿದ್ದರು.
ಅವರ ಮತ್ತೊಂದು ಪ್ರಮುಖ ಸೃಜನಾತ್ಮಕ ಒಡನಾಟ ಕಮಲ್ ಹಾಸನ್ ಅವರೊಂದಿಗೆ ಇತ್ತು. ಸೊಮ್ಮೊಕದಿದಿ ಸೊಕೊಕದಿದಿ, ರಾಜ ಪಾರ್ವೈ, ಪುಷ್ಪಕ ವಿಮಾನ, ಅಪೂರ್ವ ಸಹೋದರರು, ಮೈಕೆಲ್ ಮದನ ಕಾಮರಾಜನ್ ಮುಂತಾದ ಗಮನಾರ್ಹ ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು.
94ನೇ ವಯಸ್ಸಿನಲ್ಲೂ ನಿರ್ದೇಶನ
ಸಿಂಗೀತಂ ಅವರ ಸಿನಿಮಾ ಮೇಲಿನ ಪ್ರೀತಿ ಕೊನೆಯ ದಿನಗಳವರೆಗೂ ಮುಂದುವರಿದಿತ್ತು. 2026ರಲ್ಲಿ ‘ಸಿಂಗೀತಂ’ ಎಂಬ ಮ್ಯೂಸಿಕಲ್ ಫ್ಯಾಂಟಸಿ ಚಿತ್ರದ ಮೂಲಕ ಅವರು ಮತ್ತೆ ನಿರ್ದೇಶನಕ್ಕೆ ಮರಳಿದ್ದರು. ನಾಗ್ ಅಶ್ವಿನ್ ನಿರ್ಮಿಸಿದ್ದ ಈ ಚಿತ್ರ ಜೂನ್ 12ರಂದು ಬಿಡುಗಡೆಯಾಗಿತ್ತು. 94ನೇ ವಯಸ್ಸಿನಲ್ಲೂ ಸಿನಿಮಾ ನಿರ್ದೇಶಿಸಿದ ಅವರು ಚಿತ್ರರಂಗದ ಅಪರೂಪದ ಸಾಧಕರಾಗಿ ಗುರುತಿಸಿಕೊಂಡಿದ್ದರು.
ಅವರ ನಿಧನದಿಂದ ಭಾರತೀಯ ಚಿತ್ರರಂಗದ ಒಂದು ವಿಶಿಷ್ಟ ಪ್ರಯೋಗಶೀಲ ಅಧ್ಯಾಯ ಅಂತ್ಯಗೊಂಡಂತಾಗಿದೆ. ವಿಭಿನ್ನ ಕಥನ, ಹೊಸ ತಂತ್ರಜ್ಞಾನ ಮತ್ತು ಸೃಜನಶೀಲ ಪ್ರಯೋಗಗಳ ಮೂಲಕ ಅವರು ನೀಡಿದ ಕೊಡುಗೆಗಳು ಮುಂದಿನ ಪೀಳಿಗೆಯ ಚಿತ್ರ ನಿರ್ದೇಶಕರಿಗೂ ಸ್ಫೂರ್ತಿಯಾಗಲಿವೆ.
ಚಿತ್ರರಂಗಕ್ಕೆ ಶಿವರಾಜ್ ಕುಮಾರ್ ಪರಿಚಯಿಸಿದ್ದರು
ಸಿಂಗೀತಂ ಶ್ರೀನಿವಾಸರಾವ್(94) ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ರಾತ್ರಿ 10.30 ಕ್ಕೆ ಕೊನೆಯುಸಿರೆಳೆದಿದ್ದಾರೆ. 1930ರ ಸೆ. 21ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಉದಯಗಿರಿಯಲ್ಲಿ ಜನಿಸಿದ್ದರು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳನ್ನು ನಿರ್ದೇಶಿಸಿದ್ದರು.
ಶಿವರಾಜ್ ಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಶ್ರೀನಿವಾಸರಾವ್ ಆನಂದ್ ಸಿನಿಮಾ ನಿರ್ದೇಶನ ಮಾಡಿದ್ದರು. ಡಾ. ರಾಜಕುಮಾರ್ ಅವರ ಹಲವು ಸಿನಿಮಾಗಳನ್ನು ನಿರ್ದೇಸಿದ್ದರು, ಚಲಿಸುವ ಮೋಡಗಳು, ಹಾಲು ಜೇನು, ಭಾಗ್ಯದ ಲಕ್ಷ್ಮಿ ಬಾರಮ್ಮ, 2 ನಕ್ಷತ್ರಗಳು, ಶ್ರಾವಣ ಬಂತು, ಶೃತಿ ಸೇರಿದಾಗ ಚಿತ್ರಗಳನ್ನು ನಿರ್ದೇಶಿಸಿದ್ದರು.
ರಾಘವೇಂದ್ರ ರಾಜಕುಮಾರ್ ಅವರ ಚಿರಂಜೀವಿ ಸುಧಾಕರ್ ಚಿತ್ರ ನಿರ್ದೇಶಿಸಿದ್ದರು. ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಮೂರು ಕರ್ನಾಟಕ ಚಲನಚಿತ್ರ ಪ್ರಶಸ್ತಿ, ನಂದಿ ಪ್ರಶಸ್ತಿ, ಫಿಲಂ ಫೇರ್ ಪ್ರಶಸ್ತಿಗೆ ಸಂಗೀತಂ ಶ್ರೀನಿವಾಸರು ಭಾಜನರಾಗಿದ್ದರು. 1988ರಲ್ಲಿ ಸಂಭಾಷಣೆಗಳಿಲ್ಲದ ಪುಷ್ಪಕ ವಿಮಾನ ಸಿನಿಮಾ ನಿರ್ದೇಶಿಸಿದ್ದರು.

