ಮೈಸೂರು: ಮೈಸೂರಿನಲ್ಲಿ ಶನಿವಾರ ಸಂಜೆ ನಿಧನರಾದ ಖ್ಯಾತ ಗಾಯಕಿ ಎಸ್. ಜಾನಕಿ(88) ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಮೈಸೂರಿನ ಬೋಗಾದಿ ರಸ್ತೆಯ ಕಣಿಯನಹುಂಡಿಯಲ್ಲಿ ಭಾನುವಾರ ಸಂಜೆ ನೆರವೇರಲಿದೆ.
ಅಂತ್ಯಸಂಸ್ಕಾರಕ್ಕೆ ಮುನ್ನ ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಸ್. ಜಾನಕಿ ಅವರ ಇಚ್ಛೆಯಂತೆ ಅಂತ್ಯಕ್ರಿಯೆ ನೆರವೇರಲಿದೆ. ನವೀನ್ ಫಾರಂ ಹೌಸ್ ನಲ್ಲಿ ಅಂತಿಮ ವಿಧಿ ವಿಧಾನ ನಡೆಸಿ ನಂತರ ಕಣಿಯನಹುಂಡಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು.
ಅವರ ಪುತ್ರ ಮುರಳಿಕೃಷ್ಣ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು, ಮೊಮ್ಮಗಳು ಅಪ್ಸರಾ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ ಎಂದು ಹೇಳಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಎಸ್. ಜಾನಕಿ ಅವರೇ ಮೈಸೂರಿನಲ್ಲಿ ಅಂತ್ಯ ಸಂಸ್ಕಾರ ನಡೆಸಬೇಕು ಎಂದು ಹೇಳಿದ್ದರು. ಮುಖ್ಯಮಂತ್ರಿಯವರು ದೂರವಾಣಿಯಲ್ಲಿ ಮಾತನಾಡಿ ಸರ್ಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸುವಂತೆ ಹೇಳಿದ್ದಾರೆ. ಕುಟುಂಬದವರೊಂದಿಗೆ ಚರ್ಚಿಸಿದ ಬಳಿಕ ಸಿಎಂ ನಿರ್ದೇಶನದ ಮೇರೆಗೆ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

