ಕಾರವಾರ: ಸರ್ಕಾರಿ ಕಾಲೇಜಿನಲ್ಲಿ ಆಡಿಟ್ ಗೆ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಆಡಿಟರ್ ಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಬೈಂದೂರು ಸರ್ಕಾರಿ ಕಾಲೇಜಿನಲ್ಲಿ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಆಡಿಟರ್ ಗಳಾದ ರಘುನಂದನ್ ಮತ್ತು ಶ್ರೀಧರ್ ಲೋಕಾಯುಕ್ತ ಬಲೆಗೆ ಬಿದ್ದವರು ಎಂದು ಹೇಳಲಾಗಿದೆ. 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ನಿನ್ನೆ ಅಂಕೋಲಾ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ್ದರು. ಬೆಂಗಳೂರಿನಿಂದ ಬಂದಿದ್ದ ರಘುನಂದನ್ ಮತ್ತು ಶ್ರೀಧರ್ 1 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. 30 ಸಾವಿರ ರೂ. ಮುಂಗಡ ಪಡೆದುಕೊಂಡಿದ್ದರು. ಉಳಿದ ಹಣವನ್ನು ಬೈಂದೂರು ಕಾಲೇಜಿಗೆ ತರುವಂತೆ ಸೂಚಿಸಿದ್ದರು.
ಇಂದು ಬೈಂದೂರು ಕಾಲೇಜಿನಲ್ಲಿ ಆಡಿಟ್ ಮಾಡುವಾಗ ಲೋಕಾಯುಕ್ತ ದಾಳಿ ನಡೆದಿದೆ. ಆಡಿಟರ್ ಗಳಿಗೆ ಬಾಕಿ ಹಣ ನೀಡುವಾಗ ಲೋಕಾಯುಕ್ತ ಎಸ್ಪಿ ದಾಳಿ ನಡೆಸಿದ್ದಾರೆ. ಲಂಚ ಸ್ವೀಕರಿಸುತ್ತಿದ್ದ ಆಡಿಟರ್ ಗಳಾದ ರಘುನಂದನ್ ಮತ್ತು ಶ್ರೀಧರ್ ಅವರನ್ನು ಬಂಧಿಸಲಾಗಿದೆ. ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

