ಮಧ್ಯರಾತ್ರಿ 1 ಗಂಟೆಗೆ ಮನೆಯವರಿಗೆ ತಿಳಿಯದಂತೆ ಏಳು ವರ್ಷದ ಬಾಲಕನೊಬ್ಬ ಮೊಬೈಲ್‌ನಲ್ಲಿ ರ್ಯಾಪಿಡೋ ಬೈಕ್ ಬುಕ್ ಮಾಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಸ್ಮಾರ್ಟ್‌ಫೋನ್ ಬಳಸುವುದರಲ್ಲಿ ಎಷ್ಟು ಚುರುಕಾಗಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ, ಕೆಲವೊಮ್ಮೆ ಅವರ ಅರಿವಿಲ್ಲದ ಕೃತ್ಯಗಳು ಪೋಷಕರಿಗೆ ಆತಂಕ ಉಂಟುಮಾಡುತ್ತವೆ. ಇಂತಹದ್ದೇ ಒಂದು ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರ್ಯಾಪಿಡೋ ಬೈಕ್ ರೈಡರ್‌ನ ಸಮಯಪ್ರಜ್ಞೆ ಮತ್ತು ಜವಾಬ್ದಾರಿಯುತ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲಭ್ಯವಾದ ಮಾಹಿತಿಯ ಪ್ರಕಾರ, ಏಳು ವರ್ಷದ ಬಾಲಕನೊಬ್ಬ ಮಧ್ಯರಾತ್ರಿ ವೇಳೆ ಮನೆಯವರಿಗೆ ತಿಳಿಯದಂತೆ ತನ್ನ ಕೈಯಲ್ಲಿದ್ದ ಮೊಬೈಲ್‌ನಲ್ಲಿ ರ್ಯಾಪಿಡೋ ಬೈಕ್ ಬುಕ್ ಮಾಡಿದ್ದಾನೆ. ಬುಕ್ಕಿಂಗ್ ಬಂದ ಹಿನ್ನೆಲೆಯಲ್ಲಿ ಪಿಕಪ್ ಸ್ಥಳಕ್ಕೆ ತಲುಪಿದ ರ್ಯಾಪಿಡೋ ರೈಡರ್, ಕತ್ತಲಿನಲ್ಲಿ ಒಬ್ಬನೇ ನಿಂತಿದ್ದ ಬಾಲಕನನ್ನು ನೋಡಿ ಬೆಚ್ಚಿಬಿದ್ದಿದ್ದಾನೆ.
ಬಳಿಕ ಬಾಲಕನನ್ನು ಎಲ್ಲಿಗೆ ಹೋಗಬೇಕು, ಮನೆಯವರು ಎಲ್ಲಿದ್ದಾರೆ ಎಂದು ವಿಚಾರಿಸಿದಾಗ, ಆತ ಮನೆಯವರಿಗೆ ತಿಳಿಯದಂತೆ ತಮಾಷೆಗಾಗಿ ಬೈಕ್ ಬುಕ್ ಮಾಡಿದ್ದಾನೆ ಎಂಬುದು ರೈಡರ್‌ಗೆ ತಿಳಿದುಬಂದಿದೆ. ಕೂಡಲೇ ರೈಡ್ ಅನ್ನು ರದ್ದುಗೊಳಿಸಿದ ರೈಡರ್, ಬಾಲಕನಿಗೆ ಮನವರಿಕೆ ಮಾಡಿ ಸುರಕ್ಷಿತವಾಗಿ ಮನೆಗೆ ಕಳುಹಿಸಿ ತನ್ನ ಜವಾಬ್ದಾರಿಯನ್ನು ಮೆರೆದಿದ್ದಾನೆ.ಈ ಘಟನೆಯ ಸಂಪೂರ್ಣ ದೃಶ್ಯವನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಅದು ಇದೀಗ ವೈರಲ್ ಆಗಿದೆ. ರೈಡರ್‌ನ ಸಮಯೋಚಿತ ನಿರ್ಧಾರ ಮತ್ತು ಮಾನವೀಯತೆಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
“ಆ ಸ್ಥಳದಲ್ಲಿ ಒಳ್ಳೆಯ ವ್ಯಕ್ತಿಯ ಬದಲು ದುರುದ್ದೇಶ ಹೊಂದಿದ ಯಾರಾದರೂ ಇದ್ದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಇಂತಹ ಜವಾಬ್ದಾರಿಯುತ ರೈಡರ್‌ಗಳು ಸಮಾಜಕ್ಕೆ ಅಗತ್ಯ” ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.ಈ ಘಟನೆ ಮಕ್ಕಳ ಕೈಗೆ ಸ್ಮಾರ್ಟ್‌ಫೋನ್ ನೀಡುವಾಗ ಪೋಷಕರು ಇನ್ನಷ್ಟು ಎಚ್ಚರಿಕೆಯಿಂದ ಇರಬೇಕೆಂಬ ಸಂದೇಶವನ್ನೂ ಮತ್ತೊಮ್ಮೆ ನೆನಪಿಸಿದೆ.

