ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೆ ಮೊಬೈಲ್ ಅಥವಾ ಲ್ಯಾಪ್‌ಟಾಪ್ ನಮ್ಮ ಕೈಯಲ್ಲೇ ಇರುತ್ತದೆ. ಕಚೇರಿ ಕೆಲಸವಾಗಲಿ, ಮನರಂಜನೆಯಾಗಲಿ, ಇಂದು ಬಹುತೇಕ ಎಲ್ಲವೂ ಡಿಜಿಟಲ್ ಆಗಿದೆ. ಆದರೆ ಇದರ ಅತಿಯಾದ ಬಳಕೆ ನಿಮ್ಮ ಕೈಗಳು ಮತ್ತು ಮಣಿಕಟ್ಟಿನ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡಬಹುದು ಎಂಬುದು ನಿಮಗೆ ಗೊತ್ತೇ?
ಒಂದು ಕಾಲದಲ್ಲಿ ಹೆಚ್ಚಾಗಿ ವಯೋವೃದ್ಧರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ Carpal Tunnel Syndrome (ಕಾರ್ಪಲ್ ಟನಲ್ ಸಿಂಡ್ರೋಮ್) ಎಂಬ ನರ ಸಂಬಂಧಿ ಸಮಸ್ಯೆ ಈಗ ಯುವಕರು, ಐಟಿ ಉದ್ಯೋಗಿಗಳು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳಲ್ಲಿಯೂ ಹೆಚ್ಚಾಗಿ ಕಂಡುಬರುತ್ತಿದೆ.
ಮಣಿಕಟ್ಟಿನಲ್ಲಿ ಏನಾಗುತ್ತದೆ?
ನಮ್ಮ ಮಣಿಕಟ್ಟಿನ ಭಾಗದಲ್ಲಿ ಕಾರ್ಪಲ್ ಟನಲ್ ಎಂಬ ಕಿರಿದಾದ ದಾರಿ ಇರುತ್ತದೆ. ಇದರ ಮೂಲಕ ಕೈ ಬೆರಳುಗಳಿಗೆ ಸ್ಪರ್ಶ ಮತ್ತು ಶಕ್ತಿಯನ್ನು ಒದಗಿಸುವ ಮೀಡಿಯನ್ ನರ್ವ್ (Median Nerve) ಹಾದುಹೋಗುತ್ತದೆ. ದಿನವಿಡೀ ಮೊಬೈಲ್ ಸ್ಕ್ರೋಲ್ ಮಾಡುವುದು, ಗಂಟೆಗಟ್ಟಲೆ ಕೀಬೋರ್ಡ್‌ನಲ್ಲಿ ಟೈಪ್ ಮಾಡುವುದು ಅಥವಾ ಗೇಮಿಂಗ್ ಮಾಡುವುದರಿಂದ ಈ ನರದ ಮೇಲೆ ನಿರಂತರ ಒತ್ತಡ ಉಂಟಾಗಿ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಈ ಲಕ್ಷಣಗಳು ಕಾಣಿಸುತ್ತಿವೆಯೇ?
ಈ ಸಮಸ್ಯೆ ಉಂಟಾದರೆ ಕೈ ಬೆರಳುಗಳಲ್ಲಿ ಜುಮ್ಮೆನಿಸುವುದು, ಸೂಜಿ ಚುಚ್ಚಿದಂತ ಅನುಭವ, ಮರಗಟ್ಟುವಿಕೆ, ಮಣಿಕಟ್ಟಿನಲ್ಲಿ ತೀವ್ರ ನೋವು ಕಾಣಿಸಿಕೊಳ್ಳಬಹುದು. ವಿಶೇಷವಾಗಿ ರಾತ್ರಿ ಸಮಯದಲ್ಲಿ ಈ ನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕ್ರಮೇಣ ಕೈಯ ಹಿಡಿತದ ಶಕ್ತಿ ಕಡಿಮೆಯಾಗಿ, ಕೈಯಲ್ಲಿದ್ದ ವಸ್ತುಗಳು ಕೆಳಗೆ ಬೀಳುವ ಪರಿಸ್ಥಿತಿಯೂ ಉಂಟಾಗಬಹುದು. ಆರಂಭದಲ್ಲಿ ಸಾಮಾನ್ಯ ನೋವಿನಂತೆ ಕಂಡರೂ ನಿರ್ಲಕ್ಷಿಸಿದರೆ ಕೈಯ ಸ್ನಾಯುಗಳು ದುರ್ಬಲಗೊಂಡು ನರಗಳಿಗೆ ಶಾಶ್ವತ ಹಾನಿಯಾಗುವ ಅಪಾಯವಿದೆ.
ಯಾರಿಗೆ ಹೆಚ್ಚು ಅಪಾಯ?
- ದಿನವಿಡೀ ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಿಗೆ
- ಸ್ಥೂಲಕಾಯ (ಬೊಜ್ಜು) ಇರುವವರಿಗೆ
- ಮಧುಮೇಹ ಇರುವವರಿಗೆ
- ಥೈರಾಯ್ಡ್ ಸಮಸ್ಯೆ ಇರುವವರಿಗೆ
- ತಪ್ಪಾದ ಭಂಗಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ
- ಕೈಗೆ ಅನುಕೂಲಕರವಲ್ಲದ ಕೀಬೋರ್ಡ್ ಮತ್ತು ಮೌಸ್ ಬಳಸುವವರಿಗೆ
- ದೈಹಿಕ ಚಟುವಟಿಕೆ ಕಡಿಮೆ ಇರುವವರಿಗೆ
ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದು ಹೇಗೆ?
- ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಾಗ ಪ್ರತಿ 45 ರಿಂದ 60 ನಿಮಿಷಗಳಿಗೊಮ್ಮೆ ವಿರಾಮ ತೆಗೆದುಕೊಳ್ಳಿ.
- ಟೈಪಿಂಗ್ ಮಾಡುವಾಗ ಮಣಿಕಟ್ಟನ್ನು ಸಹಜ ಮತ್ತು ನೇರ ಸ್ಥಿತಿಯಲ್ಲಿ ಇಡಿ.
- ಎರ್ಗೊನಾಮಿಕ್ ಕೀಬೋರ್ಡ್ ಮತ್ತು ಮೌಸ್ ಬಳಸುವುದು ಉತ್ತಮ.
- ಮೊಬೈಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.
- ಮಧ್ಯ ಮಧ್ಯೆ ಮಣಿಕಟ್ಟಿಗೆ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡಿ.
ತಂತ್ರಜ್ಞಾನ ನಮ್ಮ ಜೀವನವನ್ನು ಸುಲಭಗೊಳಿಸಿದರೂ, ಅದರ ಅತಿಯಾದ ಬಳಕೆ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಆದ್ದರಿಂದ ಡಿಜಿಟಲ್ ಸಾಧನಗಳನ್ನು ಬಳಸುವಾಗ ಕೈಗಳಿಗೆ ನಿಯಮಿತವಾಗಿ ವಿಶ್ರಾಂತಿ ನೀಡುವುದು ಅತ್ಯಗತ್ಯ.
ಗಮನಿಸಿ: ಕೈ ಬೆರಳುಗಳಲ್ಲಿ ಜುಮ್ಮೆನಿಸುವಿಕೆ, ಮರಗಟ್ಟುವಿಕೆ ಅಥವಾ ಮಣಿಕಟ್ಟಿನ ನೋವು ನಿರಂತರವಾಗಿ ಕಾಣಿಸಿಕೊಂಡರೆ ಸ್ವಯಂ ಔಷಧಿ ಸೇವಿಸದೇ, ತಕ್ಷಣ ನರರೋಗ ಅಥವಾ ಅಸ್ಥಿ ತಜ್ಞರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು.

