HomeLive Newsಬದರಿನಾಥ್ ದೇವಾಲಯದ ದೇಣಿಗೆ ಅಕ್ರಮ: ತನಿಖೆಗೆ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿ ರಚನೆ

ಬದರಿನಾಥ್ ದೇವಾಲಯದ ದೇಣಿಗೆ ಅಕ್ರಮ: ತನಿಖೆಗೆ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿ ರಚನೆ

ಡೆಹ್ರಾಡೂನ್: ಅಯೋಧ್ಯೆಯ ರಾಮ ಮಂದಿರದಲ್ಲಿ ಕಾಣಿಕೆ ಹಣ ಕಳ್ಳತನ ವಿವಾದ ಭಾರಿ ಚರ್ಚೆಗೆ ಕಾರಣವಾಗಿರುವ ನಡುವೆಯೇ ದೇಶದ ಮತ್ತೊಂದು ಪ್ರಸಿದ್ಧ ಯಾತ್ರಾ ಸ್ಥಳ ಉತ್ತರಾಖಂಡದ ಬದರಿನಾಥ ದೇವಾಲಯದಲ್ಲೂ ಕಾಣಿಕೆ ಮತ್ತು ದೇಣಿಗೆ ಹಣ ದುರುಪಯೋಗವಾಗಿರುವ ಗಂಭೀರ ಆರೋಪ ಕೇಳಿಬಂದಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸರ್ಕಾರ, ತನಿಖೆಗಾಗಿ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಧೀರಜ್ ಸಿಂಗ್ ಗರ್ಬ್ಯಾಲ್ ಹೊರಡಿಸಿರುವ ಆದೇಶದ ಪ್ರಕಾರ, ಈ ಉನ್ನತ ಮಟ್ಟದ ಸಮಿತಿಯು ಗರ್ವಾಲ್ ಆಯುಕ್ತ (ಕಮಿಷನರ್) ಆನಂದ್ ಸ್ವರೂಪ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ನ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ತಿವಾರಿ ಮತ್ತು ಹಣಕಾಸು ನಿರ್ದೇಶಕ ಜಗತ್ ಸಿಂಗ್ ಚೌಹಾಣ್ ಇದರ ಇತರ ಸದಸ್ಯರಾಗಿದ್ದಾರೆ.

ಈ ಸಮಿತಿಯು ದೇಣಿಗೆ ಅಕ್ರಮಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಮುಂದಿನ 15 ದಿನಗಳ ಒಳಗಾಗಿ ತನ್ನ ವರದಿ ಹಾಗೂ ಕಠಿಣ ಶಿಫಾರಸುಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ದೇವಾಲಯದ ಆಡಳಿತ ಮತ್ತು ಹಣದ ಎಣಿಕೆ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಹಾಗೂ ಫೂಲ್‌ಪ್ರೂಫ್ ಮಾಡುವ ಜವಾಬ್ದಾರಿಯನ್ನೂ ಈ ಸಮಿತಿಗೆ ನೀಡಲಾಗಿದೆ.

ಇದೇ ವೇಳೆ, ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ತನ್ನ ಕಚೇರಿಯಲ್ಲೇ ಆಂತರಿಕ ತನಿಖೆ ನಡೆಸಿ ದೊಡ್ಡ ಕ್ರಮ ಕೈಗೊಂಡಿದೆ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ, ದೇವಾಲಯ ಸಮಿತಿಯ ಖಾಸಗಿ ಕಾರ್ಯದರ್ಶಿಯಾಗಿದ್ದ ಪ್ರಮೋದ್ ನೌಟಿಯಾಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ ತಿಳಿಸಿದ್ದಾರೆ.

ಪ್ರಮೋದ್ ಹುದ್ದೆಯಲ್ಲೇ ಮುಂದುವರಿದರೆ ಸಿಸಿಟಿವಿ ಸಾಕ್ಷ್ಯ ಹಾಗೂ ತನಿಖೆಯನ್ನು ಹಳಿತಪ್ಪಿಸುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಹಗರಣ ಬೆಳಕಿಗೆ ಬಂದಿದ್ದು ಹೇಗೆ? ಬದರಿನಾಥ ಧಾಮದಲ್ಲಿ ಭಕ್ತರು ನೀಡಿದ ಕಾಣಿಕೆ ಹಣವನ್ನು ಎಣಿಕೆ ಮಾಡುವ ಸಂದರ್ಭದಲ್ಲಿ ಕೆಲವು ಸಿಬ್ಬಂದಿ ಅಕ್ರಮ ಎಸಗುತ್ತಿದ್ದಾರೆ ಎಂಬ ಆರೋಪದ ವಿಡಿಯೋಗಳು ಮತ್ತು ಪೋಸ್ಟ್‌ಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಇದಾದ ಬಳಿಕ ‘ಭೈರವ ಸೇನಾ’ ಎಂಬ ಸ್ಥಳೀಯ ಸಂಘಟನೆಯು ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಅಧಿಕೃತವಾಗಿ ದೂರು ನೀಡಿತು.

ಸಿಸಿಟಿವಿ ಕ್ಯಾಮೆರಾ ವಿವಾದಕ್ಕೆ ಸ್ಪಷ್ಟನೆ ತನಿಖೆ ಆರಂಭವಾಗುತ್ತಿದ್ದಂತೆ ದೇವಸ್ಥಾನದ ಎಣಿಕೆ ಕೊಠಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ದಿಢೀರ್ ಬದಲಾಯಿಸಲಾಗಿದೆ ಎಂಬ ಹೊಸ ವಿವಾದ ಎದ್ದಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಕೆಟಿಸಿ ಸಿಇಒ, ಕ್ಯಾಮೆರಾಗಳನ್ನು ಬದಲಾಯಿಸುವುದು ನಿಯಮಿತ ಪ್ರಕ್ರಿಯೆಯಾಗಿದೆ. ಹಳೆಯ ಕ್ಯಾಮೆರಾಗಳಲ್ಲಿದ್ದ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳ ರೆಕಾರ್ಡಿಂಗ್ ಅನ್ನು ಸುರಕ್ಷಿತವಾಗಿ ಸಂರಕ್ಷಿಸಿಡಲಾಗಿದ್ದು, ಅದನ್ನು ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular