ಬೆಂಗಳೂರು: ರಾಜ್ಯದ ವಾಹನ ಸವಾರರಲ್ಲಿ ದಿನೇದಿನೆ ಹೆಚ್ಚುತ್ತಿರುವ ವಿಐಪಿ ಮತ್ತು ಫ್ಯಾನ್ಸಿ ನಂಬರ್‌ಗಳ ಆಕರ್ಷಣೆಯು ಸಾರಿಗೆ ಇಲಾಖೆಗೆ ಬಿಗ್ ಲಾಟರಿ ತಂದುಕೊಟ್ಟಿದೆ. ಉದ್ಯಮಿಗಳು, ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ತಮ್ಮ ಅದೃಷ್ಟದ ಸಂಖ್ಯೆಗಳಿಗಾಗಿ ಮುಗಿಬೀಳುತ್ತಿದ್ದು, ಕೇವಲ 2025-26ನೇ ಸಾಲಿನಲ್ಲೇ ಫ್ಯಾನ್ಸಿ ನಂಬರ್‌ಗಳ ಹರಾಜಿನಿಂದ ಸಾರಿಗೆ ಇಲಾಖೆಗೆ ಬರೋಬ್ಬರಿ 118.14 ಕೋಟಿ ರೂ. ಆದಾಯ ಹರಿದು ಬಂದಿದೆ.
ಕಾರು ಅಥವಾ ಬೈಕ್‌ಗಳು ಇತ್ತೀಚಿನ ದಿನಗಳಲ್ಲಿ ಕೇವಲ ಸಾರಿಗೆ ಸಂಪರ್ಕದ ಸಾಧನವಾಗಿ ಉಳಿದಿಲ್ಲ, ಬದಲಿಗೆ ಮಾಲೀಕರ ಸಾಮಾಜಿಕ ಅಂತಸ್ತು ಮತ್ತು ಪ್ರತಿಷ್ಠೆಯ ಸಂಕೇತವಾಗಿ ಬದಲಾಗಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ.
ಸಿಲಿಕಾನ್ ಸಿಟಿಯಲ್ಲೇ ಭಾರಿ ಕ್ರೇಜ್: ‘0001’ ಗೆ 28.60 ಲಕ್ಷ ರೂ.
ರಾಜ್ಯದ ಇತರೆ ನಗರಗಳಿಗೆ ಹೋಲಿಸಿದರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಷಾರಾಮಿ ಕಾರುಗಳ ಮಾರಾಟ ಹೆಚ್ಚಿದ್ದು, ಫ್ಯಾನ್ಸಿ ನಂಬರ್‌ಗಳಿಗೆ ಭಾರಿ ಪೈಪೋಟಿಯಿದೆ. ಅದರಲ್ಲೂ ಕೇಂದ್ರ ಪ್ರಾದೇಶಿಕ ಸಾರಿಗೆ ಕಚೇರಿ (ಕೆಎ-01, ಕೋರಮಂಗಲ) ವ್ಯಾಪ್ತಿಯಲ್ಲಿ ಅತಿ ಹೆಚ್ಚು ಹರಾಜು ಪ್ರಕ್ರಿಯೆ ನಡೆದಿದೆ. ಕೋರಮಂಗಲ ಆರ್‌ಟಿಒ ವ್ಯಾಪ್ತಿಯಲ್ಲಿ ‘0001’ ಸಂಖ್ಯೆಯೊಂದು ಗರಿಷ್ಠ 28.60 ಲಕ್ಷ ರೂಪಾಯಿಗೆ ಬಿಡ್ ಆಗುವ ಮೂಲಕ ಹೊಸ ದಾಖಲೆ ಬರೆದಿದೆ. ಬೆಂಗಳೂರಿನ ನಂತರ ಮೈಸೂರು (ಕೆಎ-09) ಕಚೇರಿ ವ್ಯಾಪ್ತಿಯಲ್ಲಿ ಫ್ಯಾನ್ಸಿ ನಂಬರ್‌ಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ.
ಈ ಫ್ಯಾನ್ಸಿ ನಂಬರ್ ಗೀಳು ಯುವ ಸಮುದಾಯ ಮಾತ್ರವಲ್ಲದೆ ಶಾಸಕರು, ಸಚಿವರು ಹಾಗೂ ಸಿನಿಮಾ ನಟ-ನಟಿಯರನ್ನೂ ಬಿಟ್ಟಿಲ್ಲ. ಬಹುತೇಕರು ಜ್ಯೋತಿಷಿಗಳನ್ನು ಕೇಳಿ ಸಂಖ್ಯಾಶಾಸ್ತ್ರದ ಪ್ರಕಾರ (Numerology) ಕೂಡಿಸಿ, ಗುಣಿಸಿ ಕೊನೆಯಲ್ಲಿ ತಮಗೆ ಒಪ್ಪುವ ಅದೃಷ್ಟದ ಸಂಖ್ಯೆಗಳನ್ನು ಪಡೆಯುತ್ತಿದ್ದಾರೆ. ಕೆಲವೊಮ್ಮೆ ವಾಹನದ ದರಕ್ಕಿಂತಲೂ ಈ ಫ್ಯಾನ್ಸಿ ನಂಬರ್‌ಗಾಗಿ ಹೆಚ್ಚಿನ ಹಣ ಖರ್ಚು ಮಾಡುತ್ತಿದ್ದಾರೆ.
ಹರಾಜಿನಲ್ಲಿ ಅತಿಹೆಚ್ಚು ಮೌಲ್ಯಕ್ಕೆ ಮಾರಾಟವಾದ ಟಾಪ್ 5 ನಂಬರ್‌ಗಳು:
ಕೆಎ-01, ಎನ್‌ಎಫ್-0001: 28.60 ಲಕ್ಷ ರೂ. (ಗರಿಷ್ಠ ದಾಖಲೆ)
ಕೆಎ-01, ಎನ್‌ಜೆ-0001: 22.85 ಲಕ್ಷ ರೂ.
ಕೆಎ-01, ಎನ್‌ಕೆ-9999: 21.75 ಲಕ್ಷ ರೂ.
ಕೆಎ-01, ಎನ್‌ಇ-0001: 21.15 ಲಕ್ಷ ರೂ.
ಕೆಎ-01, ಎನ್‌ಎಚ್-0001: 20.75 ಲಕ್ಷ ರೂ.
ವಾಹನ ಪ್ರಿಯರಲ್ಲಿ ಇಷ್ಟೊಂದು ಕ್ರೇಜ್ ಏಕಿದೆ?
ಪ್ರತಿಷ್ಠೆಯ ಸಂಕೇತ: ಐಷಾರಾಮಿ ಕಾರುಗಳಿಗೆ ‘0001’ ನಂತಹ ವಿಶಿಷ್ಟ ಸಂಖ್ಯೆಗಳಿರುವುದು ವಾಹನದ ರಾಯಲ್ ಲುಕ್ ಹಾಗೂ ಮಾಲೀಕರ ಗಾಂಭೀರ್ಯವನ್ನು ಹೆಚ್ಚಿಸುತ್ತದೆ.
ಅದೃಷ್ಟದ ನಂಬಿಕೆ: ಜನ್ಮ ದಿನಾಂಕಕ್ಕೆ ಹೊಂದುವ ಸಂಖ್ಯೆ ಅಥವಾ ಒಟ್ಟು ಮೊತ್ತ ‘9’ ಬರುವ ಸಂಖ್ಯೆಗಳು ಅದೃಷ್ಟ ತರುತ್ತವೆ ಎಂಬ ಬಲವಾದ ನಂಬಿಕೆ ಜನರಲ್ಲಿದೆ.
ಸುಲಭ ನೆನಪು: ಒಂದೇ ರೀತಿಯ ಅಂಕಿಗಳಿರುವ (1111, 7777) ಅಥವಾ ಸರಣಿ ಸಂಖ್ಯೆಗಳನ್ನು (1234) ಯಾರಾದರೂ ಸುಲಭವಾಗಿ ಗುರುತಿಸಬಹುದು.
ಮರು ಮಾರಾಟ ಮೌಲ್ಯ: ಉತ್ತಮ ಆಕರ್ಷಕ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳ ಮರು ಮಾರಾಟಕ್ಕೆ (Resale) ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇರುತ್ತದೆ.
ಫ್ಯಾನ್ಸಿ ನಂಬರ್ ಪಡೆಯುವುದು ಹೇಗೆ?
ಯಾವುದೇ ಫ್ಯಾನ್ಸಿ ನಂಬರ್ ಬೇಕಿದ್ದಲ್ಲಿ ಸಾರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸಂಖ್ಯೆ ಆಯ್ದುಕೊಂಡು ನಿಗದಿಪಡಿಸಿದ ನೋಂದಣಿ ಶುಲ್ಕ ಮತ್ತು ಮುಂಗಡ ಠೇವಣಿ ಹಣ (EMD) ಪಾವತಿಸಬೇಕು. ಹರಾಜಿನಲ್ಲಿ ಇತರೆ ಬಿಡ್ಡರ್‌ಗಳೊಂದಿಗೆ ಪೈಪೋಟಿ ನಡೆಸಿ ಗೆದ್ದ ಬಳಿಕ, ಇಲಾಖೆ ಆಯುಕ್ತರಿಂದ ಅನುಮತಿ ಪತ್ರ ಪಡೆದು 7 ದಿನದೊಳಗೆ ಬಾಕಿ ಹಣ ಕಟ್ಟಬೇಕು. ಹಣ ಕಟ್ಟಿದ ದಿನದಿಂದ 90 ದಿನದೊಳಗೆ ಫ್ಯಾನ್ಸಿ ನಂಬರ್ ನಿಮ್ಮದಾಗಲಿದೆ.

