ಬೆಂಗಳೂರು: ವಿಧಾನಪರಿಷತ್ ನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಐವರು ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮೇಲ್ಮನೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದುಕೊಳ್ಳಲಿದೆ.
ವಿಧಾನ ಪರಿಷತ್ ಒಟ್ಟು 75 ಸದಸ್ಯರನ್ನು ಹೊಂದಿದ್ದು, ಕಾಂಗ್ರೆಸ್ 37, ಸಭಾಧ್ಯಕ್ಷರು ಸೇರಿದಂತೆ ಬಿಜೆಪಿ 30, ಜೆಡಿಎಸ್ 7 ಹಾಗೂ ಒಬ್ಬರು ಪಕ್ಷೇತರ ಸದಸ್ಯರು ಇದ್ದಾರೆ. ಗುರುವಾರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನ ಐವರು, ಬಿಜೆಪಿಯ ಇಬ್ಬರು ಜಯಗಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಲ 39ಕ್ಕೆ ಏರಿಕೆಯಾಗಿದೆ. ಬಿಜೆಪಿ ಬಲ ಸಭಾಧ್ಯಕ್ಷರು ಸೇರಿ 29 ಇದ್ದು, ಜೆಡಿಎಸ್ ಬಲ 6ಕ್ಕೆ ಇಳಿದಿದೆ. ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ.
ಬಿಜೆಪಿ -ಜೆಡಿಎಸ್ ಬಲ 35ಕ್ಕೆ ಇಳಿಕೆಯಾಗಿದ್ದು, ಕಾಂಗ್ರೆಸ್ ಬಲ 39ಕ್ಕೆ ಏರಿಕೆಯಾಗಿರುವುದರಿಂದ ಮತ್ತು ಕಾಂಗ್ರೆಸ್ ಬಹುಮತ ಹೊಂದಿರುವುದರಿಂದ ಕಾಂಗ್ರೆಸ್ ಪಕ್ಷದವರನ್ನೇ ಸಭಾಪತಿ ಮತ್ತು ಉಪ ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡುವುದು ಖಚಿತವಾಗಿದೆ. ಕಾಂಗ್ರೆಸ್ ಮಂಡಿಸುತ್ತಿದ್ದ ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳಲು ಬಹುಮತ ಇಲ್ಲದ ಕಾರಣ ಸಾಧ್ಯವಾಗುತ್ತಿರಲಿಲ್ಲ. ಈಗ ಆಡಳಿತಾರೂಢ ಕಾಂಗ್ರೆಸ್ ಮೇಲ್ಮನೆಯಲ್ಲೂ ಬಹುಮತ ಹೊಂದಿರುವುದರಿಂದ ವಿಧೇಯಕಕ್ಕೆ ಅಂಗೀಕಾರ ಪಡೆಯುವುದು ಸುಲಭವಾಗಲಿದೆ.

