ಹುಟ್ಟುಹಬ್ಬ ಎಂದಾಕ್ಷಣ ಕೇಕ್ ಕಟಿಂಗ್, ಬಲೂನ್ಗಳು, ಪಾರ್ಟಿ ಪಾಪ್ಸ್ ಹಾಗೂ ‘ಹ್ಯಾಪಿ ಬರ್ತ್ಡೇ’ ಹಾಡುಗಳೇ ನೆನಪಾಗುವ ಇಂದಿನ ಕಾಲದಲ್ಲಿ, ಬೆಂಗಳೂರಿನಲ್ಲಿ ನಡೆದ ಮಕ್ಕಳಿಬ್ಬರ ಹುಟ್ಟುಹಬ್ಬದ ಆಚರಣೆ ಭಾರತೀಯ ಸಂಸ್ಕೃತಿಯ ಸೊಗಡನ್ನು ಪರಿಚಯಿಸುವಂತಿತ್ತು.
ಜೆ.ಪಿ. ನಗರದ 7ನೇ ಹಂತದಲ್ಲಿ ಆಯುರ್ವೇದ ವೈದ್ಯ ದಂಪತಿಗಳಾದ ಡಾ. ಶ್ರೀಹರ್ಷ ಮತ್ತು ಡಾ. ರಂಜನಿ ಅವರ ಪುತ್ರರಾದ ಚಿರಂಜೀವಿ ವಾದೀಂದ್ರ ಹಾಗೂ ಚಿರಂಜೀವಿ ಯೋಗೀಂದ್ರ ಅವರ ಹುಟ್ಟುಹಬ್ಬವನ್ನು ವೇದಘೋಷ, ದೀಪಪ್ರಜ್ವಲನೆ, ಆರತಿ, ರಕ್ಷಾಸೂತ್ರ, ಹರಿನಾಮಸ್ಮರಣೆ ಹಾಗೂ ಶಾಸ್ತ್ರೀಯ ಸಂಗೀತದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪಾಶ್ಚಾತ್ಯ ಶೈಲಿಯ ಆಚರಣೆಗೆ ಬದಲಾಗಿ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವ ಈ ವಿಭಿನ್ನ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಭಾರತೀಯರಾದ ನಮಗೆ ನಮ್ಮ ಅರಿವಿಲ್ಲದೆಯೇ ನಾವು ಎಷ್ಟು ಬದಲಾಗಿ ಬಿಟ್ಟಿದ್ದೇವೆ, ನಮ್ಮತನವನ್ನು ನಾವು ಎಷ್ಟು ಮರೆತಿದ್ದೇವೆ, ಎಷ್ಟು ಪಾಶ್ಚತ್ಯ ರಾಗಿದ್ದೇವೆ ಅಂತ ತಲೆಗೆ ಗೋಚರವಾದದ್ದು ಈ ಪುಟ್ಟ ಕಂದಮ್ಮಗಳ ಹುಟ್ಟು ಹಬ್ಬದ ಆಚರಣೆಗೆ ನಾವು ಹೋದಾಗ. ಸಭಾಂಗಣವನ್ನು ಪ್ರವೇಶಿಸಿದ ಕೂಡಲೇ ಸುಶ್ರಾವ್ಯವಾದ ಕ್ಲಾಸಿಕಲ್ ಮ್ಯೂಸಿಕ್ ನ ಧ್ವನಿ. ಎಲ್ಲೂ ಸಹ ಒಂದು ಬಲೂನ್ ಕೂಡ ನಮಗೆ ಕಾಣಿಸಲಿಲ್ಲ . ವೇದಿಕೆಯ ಮುಂದೆ ಬಾಲಕೃಷ್ಣ ಹಾಗೂ ಹನುಮಂತರ ದೊಡ್ಡದಾದ ಚಿತ್ರ ಮತ್ತು ವಿಗ್ರಹ. ಅದರ ಮುಂದೆ ಸುಂದರವಾದ ರಂಗವಲ್ಲಿ ಮತ್ತು ಹೂವಿನ ಅಲಂಕಾರ. ವೇದಿಕೆಯ ಮೇಲೆ ಸಿಂಪಲ್ ಆಗಿದ್ದರೂ ಬಹಳ ಸುಂದರವಾದಂತಹ ಡೆಕೋರೇಷನ್. ಮಧ್ಯದಲ್ಲಿದ್ದ ಬ್ಯಾನರ್ ನ ಮೇಲೆ, “ಸಂಜೀವ ಶರದ: ಶತಮ್ ಎನ್ನುವ ವೇದದ ವಾಕ್ಯವನ್ನು ಕಂಡು ನಮಗೆ ಬಹಳ ಸಂತೋಷವಾಯಿತು. ಮಕ್ಕಳ ಅಜ್ಜಿಯ ಬಳಿ ಮಾತನಾಡಿದಾಗ ತಿಳಿಯಿತು ಡೆಕೋರೇಷನ್ ಅನ್ನು ಸ್ವತ: ಮನೆಯವರೇ ಮಾಡಿದ್ದರು ಎಂದು.
ನಾನು ಮಾತನಾಡುತ್ತಿರುವಂತಹ ಹುಟ್ಟು ಹಬ್ಬದ ಆಚರಣೆ ರಾಮಕೃಷ್ಣರಂತೆ ಇರುವಂತಹ ಜೆ.ಪಿ. ನಗರದ 7ನೇ ಹಂತದಲ್ಲಿ ಇರುವ ಆಯುರ್ವೇದ ವೈದ್ಯ ದಂಪತಿಗಳಾದ ಡಾಕ್ಟರ್ ಶ್ರೀ ಹರ್ಷ ಹಾಗೂ ಡಾಕ್ಟರ್ ರಂಜನೀ ಇವರ ಪುತ್ರರಾಗಿರುವ ಚಿರಂಜೀವಿ ವಾದೀಂದ್ರ ಹಾಗೂ ಚಿರಂಜೀವಿ ಯೋಗೀಂದ್ರ ಎಂಬುವ ಪುಟಾಣಿಗಳದ್ದು. ಯೋಗೀಂದ್ರನಿಗೆ 1 ವರ್ಷ ಹಾಗೂ ವಾದೀಂದ್ರ ನಿಗೆ 4 ವರುಷ ತುಂಬಿದ ಸಂತೋಷದಲ್ಲಿ ಈ ಕಾರ್ಯಕ್ರಮವನ್ನು ಮನೆಯ ಹಿರಿಯರು ಏರ್ಪಡಿಸಿದರು.
ಕಾರ್ಯಕ್ರಮ ಶುರು ಆಗಿದ್ದು ಯಾವ ಇಂಗ್ಲೀಷ್ ಅಥವಾ ಹಿಂದಿ ಫಿಲಂ ಸಾಂಗ್ ನಿಂದಲ್ಲ ಬದಲಾಗಿ ಅವರ ಮನೆಯ ಹಿರಿಯರಿಂದ ನೆರವೇರಿದಂತಹ ದೀಪ ಪ್ರಜ್ವಲನ ಹಾಗೂ ದೇವರಿಗೆ ಪುಷ್ಪ ಸಮರ್ಪಣೆಯಿಂದ. ಕಾರ್ಯಕ್ರಮದ ಎಲ್ಲಾ ಆಯೋಜನೆಗಳ ನೇತೃತ್ವವನ್ನು ಡಾಕ್ಟರ್ ಹರ್ಷ ರವರು ನಿರ್ವಹಿಸುತ್ತಿದ್ದರೆ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಡಾ.ರಂಜನಿ ಯವರು ನೆರವೇರಿಸಿಕೊಟ್ಟರು. ಅತ್ಯಂತ ಸೊಗಸಾದ ಕನ್ನಡ ಭಾಷೆಯಲ್ಲಿ ಮೂಡಿಬಂದಂತಹ ನಿರೂಪಣೆಯು ಎಲ್ಲರ ಗಮನ ಸೆಳೆಯಿತು.
ಹುಟ್ಟಿದ ಹಬ್ಬವನ್ನು ನಾವು ಹೀಗೂ ಆಚರಿಸಬಹುದು ಎಂದು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳುವಂತೆ ಅತ್ಯಂತ ಸೊಗಸಾದ ವ್ಯವಸ್ಥೆ ಅಲ್ಲಿತ್ತು. ಮೊದಲಿಗೆ ಎಲ್ಲಾ ಮಕ್ಕಳನ್ನು ವೇದಿಕೆಯ ಮೇಲೆ ಆಹ್ವಾನಿಸಿ , ಅವರೆಲ್ಲರಿಗೂ ಪ್ರತ್ಯೇಕ ಆಸನಗಳನ್ನು ಏರ್ಪಡಿಸಿದ್ದರು. ಪೂರ್ಣಪ್ರಜ್ಞ ವಿದ್ಯಾಪೀಠದಿಂದ ಬಂದಂತಹ ವೇದ ಅಧ್ಯಯನ ವಿಭಾಗದ ಮಕ್ಕಳಾದ ಶ್ರೀ ಸಂಜಯ ಹಾಗೂ ಶ್ರೀ ಚರಣ ಇವರಿಂದ ಆಯುಷ್ಯ ಸೂಕ್ತ ದ ವೇದಘೋಷ ಎಲ್ಲರ ಮನಸ್ಸನ್ನು ಮುಟ್ಟಿತು ಹಾಗೂ ಅಲ್ಲಿನ ವಾತಾವರಣವನ್ನು ಊರ್ಜೀಕರಿಸಿತು. ವೇದಘೋಷದ ನಂತರ ನಡೆದದ್ದು ಆರತೀ ಶಾಸ್ತ್ರ. ಪಂಚ ಮುತ್ತೈದೆಯರಿಂದ ಎಲ್ಲಾ ಮಕ್ಕಳಿಗೂ ಆರತಿ ಶಾಸ್ತ್ರವು ನೆರವೇರಿತು. ಇದರ ನಂತರ ಅತ್ಯಂತ ಸುಂದರವೆನಿಸಿದ್ದು ರಕ್ಷಾ ಬಂಧನ ಎನ್ನುವ ವಿಶೇಷ ವಿಚಾರ. ಶ್ರೀ ಹನುಮಂತ ದೇವರ ಮುಂದೆ ಇಟ್ಟು ಪೂಜೆ ಮಾಡಿದ್ದಂತಹ ಕೇಸರಿ ಬಣ್ಣದ ರಕ್ಷಾ ಸೂತ್ರಗಳನ್ನು ಹಿರಿಯರು ಅಲ್ಲಿದ್ದ ಎಲ್ಲಾ ಮಕ್ಕಳಿಗೆ ಕಟ್ಟಿದರು. ಇದರ ಉದ್ದೇಶ, ಒಳ್ಳೆಯ ಬುದ್ಧಿ ,ಬಲ ಯಶಸ್ಸು, ಧೈರ್ಯ ಆಯುಷ್ಯ, ಆರೋಗ್ಯ ,ಎಲ್ಲವೂ ಎಲ್ಲಾ ಮಕ್ಕಳಿಗೂ ದೊರಕುವಂತೆ ಆಗಲಿ ಎಂಬುದಾಗಿ ಆಗಿತ್ತು. ಅಬ್ಬಾ ಎಷ್ಟು ಚಂದ ಅಲ್ವಾ ಅನಿಸಿತ್ತು. ಅಲ್ಲದೆ ಎಲ್ಲಾ ಮಕ್ಕಳಿಗೂ ಆ ರಕ್ಷಾಬಂಧನದಿಂದ ಬಹಳ ಸಂತೋಷವಾಯಿತು. ಇದರ ಜೊತೆ ಜೊತೆಗೆ ಎಲ್ಲಾ ಆಚರಣೆಯ ಹಿಂದೆ ಇರುವಂತಹ ಅತ್ಯುತ್ತಮವಾದ ಉದ್ದೇಶವನ್ನು ನಿರೂಪಣೆಯ ಮೂಲಕ ಎಲ್ಲರಿಗೂ ಪರಿಚಯಿಸುತ್ತಾ ಹೋದರು. ಇದಾದ ನಂತರ ಎಲ್ಲಾ ಮಕ್ಕಳಿಗೂ ಚಾಕಲೇಟ್ ಅಥವಾ ಕೇಕ್ ಅಲ್ಲ ಬದಲಾಗಿ ಸೇಬು ಹಣ್ಣುಗಳನ್ನು, ಉಡುಗೊರೆಗಳನ್ನು ನೀಡಿ ಆಶೀರ್ವದಿಸಿದರು. ಅಲ್ಲಿ ನೆರೆದಿದ್ದ ಎಲ್ಲಾ ಹಿರಿಯರು ಮಕ್ಕಳಿಗೆ, ಸಜ್ಜನರ ಸಂಗ, ದೀರ್ಘಾಯುಷ್ಯ, ಆರೋಗ್ಯ, ಒಳ್ಳೆಯ ವಿದ್ಯಾ ಬುದ್ಧಿ, ಐಶ್ವರ್ಯ ಎಲ್ಲವುದರ ಜೊತೆಗೆ ಧರ್ಮದ ಚೌಕಟ್ಟಿನಲ್ಲಿ ಮಕ್ಕಳು ನಡೆಯುವಂತೆ ,ಭಾರತ ದೇಶದ ಸತ್ ಪ್ರಜೆಗಳಾಗಿ ಬೆಳೆದು, ಬೇರೆಯವರನ್ನು ಪ್ರೇರೇಪಿಸುವಂತೆ ಆಶೀರ್ವದಿಸಬೇಕೆಂಬ ಕೋರಿಕೆಯೂ ಎಲ್ಲರ ಮನಮುಟ್ಟಿತು.
ಇದಿಷ್ಟೇ ಸಾಲದು ಎಂಬಂತೆ ಮುಂದೆ ಇದ್ದಿದ್ದ ಕಾರ್ಯಕ್ರಮ ವೇಣುಗಾನ ಲಹರಿ ಎಂಬ ತಂಡದ ವತಿಯಿಂದ ನಡೆದ ಅತಿ ಸುಂದರವಾದ ಗಾಯನ ಹಾಗೂ ಕೊಳಲಿನ ಜುಗಲ್ ಬಂದಿ. ಕೊಳಲಿನಲ್ಲಿ ವಿದ್ವಾನ್ ಆನಂದ ತೀರ್ಥಾಚಾರ್, ಗಾಯನದಲ್ಲಿ ಕುಮಾರಿ ಅವನಿ ಭಟ್ ಹಾಗೂ ಅತ್ಯುತ್ತಮವಾದ ತಬಲ ಹಾಗೂ ಕೀಬೋರ್ಡ್ ನ ಸಾಥ್ ನ ಜೊತೆಗೆ ಮೊದಲು ಮಕ್ಕಳಿಗೆ,
ಜನ್ಮದಿನಮಿದಂ ಅಯಿ ಪ್ರಿಯ ಸಖೇ ।
ಶಂ ತನೋತು ತೇ ಸರ್ವದಾ ಮುದಮ್ ॥ 1 ॥
ಪ್ರಾರ್ಥಯಾಮಹೇ ಭವ ಶತಾಯುಷೀ ।
ಈಶ್ವರಸ್ಸದಾ ತ್ವಾಂ ಚ ರಕ್ಷತು ॥ 2 ॥
ಪುಣ್ಯ ಕರ್ಮಣಾ ಕೀರ್ತಿಮರ್ಜಯ ।
ಜೀವನಂ ತವ ಭವತು ಸಾರ್ಥಕಮ್ ॥ 3 ॥
ಎನ್ನುವ ಅರ್ಥ ಪೂರ್ಣ ಹುಟ್ಟು ಹಬ್ಬದ ಹಾಡಿನಿಂದ ಪ್ರಾರಂಭಿಸಿ, ಮಕ್ಕಳಿಗೆ ಶುಭಾಶಯಗಳನ್ನು ಕೋರಿದರು. ಸುಮಾರು ಒಂದುವರೆ ಗಂಟೆಯ ಕಾರ್ಯಕ್ರಮ ಎಲ್ಲರ ಮನ ಮುಟ್ಟುವಂತೆ ಇತ್ತು. ಕಲಾವಿದರು ತಾವು ಪ್ರದರ್ಶಿಸುವುದಲ್ಲದೆ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ಅಭ್ಯಾಗತರಿಂದಲೂ ಹರಿನಾಮಸ್ಮರಣೆಯನ್ನು ಮಾಡಿಸಿ ವಿಠಲನ ನಾಮಕ್ಕೆ ಕುಣಿಸಿ ಎಲ್ಲರ ಮನ ತಣಿಸಿದರು. ಇದಿಷ್ಟೇ ಸಾಲದು ಎಂಬಂತೆ ಕೊನೆಗೆ ವಿದ್ವಾನ್ ವೇಣು ಗೋಪಾಲ್ ಖಟವ್ ಕರ್ ಇವರು, ಗಜೇಂದ್ರ ಮೋಕ್ಷ ಹಾಗೂ ವಿಜಯದಾಸರ ಬಹಳ ಪ್ರಸಿದ್ಧ ರಚನೆಯಾದ ಚಿರಂಜೀವಿಯಾಗೆಲೋ ಚಿನ್ನ ನೀನು ಎನ್ನುವ ದಾಸರ ಪದವನ್ನು ತಮ್ಮ ಅತ್ಯಂತ ಭಕ್ತಿ ಸಿರಿಯ ಕಂಠದಿಂದ ಹಾಡಿ, ಕಾರ್ಯಕ್ರಮಕ್ಕೆ ಒಂದು ಅರ್ಥಪೂರ್ಣ ಸಮಾಪ್ತಿಯನ್ನು ಕೊಟ್ಟರು. ಎಲ್ಲಾ ಕಲಾವಿದರು ಗಳಿಗೆ ಫಲ ತಾಂಬೂಲಗಳನ್ನು ಕೊಟ್ಟು ಗೌರವಿಸಿದರು. ಬಂದಿದ್ದ ಎಲ್ಲಾ ಅಭ್ಯಾಗತರಿಗೂ ಕೃಷ್ಣ ಬಲರಾಮರ ಚಿತ್ರವನ್ನು, ಹೆಂಗಸರಿಗೆ ಅರಿಶಿನ ಕುಂಕುಮ ಇತ್ಯಾದಿಗಳನ್ನು ಕೊಟ್ಟು ಗೌರವದಿಂದ ಸಂತೋಷ ಪಡಿಸಿದರು. ಬಹಳ ಸೊಗಸಾದಂತಹ ರುಚಿಯಾಗಿದ್ದಂತಹ ಉಪಹಾರವನ್ನು ಎಲ್ಲರಿಗೂ ಉಣಬಡಿಸಿದರು.
ಇದೆಲ್ಲದರ ಜೊತೆಗೆ, ರಾಜೇಶ್ ರವರ ಸಹಕಾರದ ಜೊತೆಗೆ ಪುಸ್ತಕ ತೇರು ಎಂಬುವಂತಹ ಬುಕ್ ಸ್ಟಾಲ್ ನ ವ್ಯವಸ್ಥೆಯನ್ನು, ಸುಮಾರು ಸಾವಿರ ಮಕ್ಕಳ ಪುಸ್ತಕಗಳ ಜೊತೆಗೆ ಸಭಾಂಗಣದಲ್ಲಿ ಮಾಡಿದ್ದರು .
ಕೇಕ್ ಕಟಿಂಗ್ ಇದ್ದರೆ ಅಷ್ಟೇ ಬರ್ತಡೇ ಎಂದು ಆಗಿರುವ ಈ ಕಾಲದಲ್ಲಿ ನಮ್ಮ ಸಂಪ್ರದಾಯವನ್ನು ಇಷ್ಟು ಸುಂದರವಾಗಿ ಆಚರಿಸಬಹುದು, ಅಷ್ಟೇ ಅಲ್ಲ ಅದನ್ನು ಇನ್ನಿತರಿಗೂ ಪರಿಚಯಿಸಬಹುದು ಎಂಬ ಸತ್ಯ ಅರಿವಾಯಿತ. ಬಂದಿದ್ದ ಎಲ್ಲರೂ ಸಹ ಇದನ್ನೇ ಮಾತನಾಡಿಕೊಳ್ಳುತ್ತಿದ್ದದ್ದನ್ನು ಕೇಳಿ ಸಂತೋಷವಾಯಿತು. ನಿಜವಾಗಿಯೂ ಒಂದು ಸಾರ್ಥಕತೆಯ ಸಂಜೆಯನ್ನು ಕಳೆದ ಬಗ್ಗೆ ನನಗೆ ಸಂತೋಷವಾಯಿತು .
ಇಂತಿ
ಡಾಕ್ಟರ್ ಶ್ರೀಹರ್ಷ ಹಾಗೂ ಡಾಕ್ಟರ್ ರಂಜಿನಿರವರ ಹಿತೈಷಿ.

