ಮೈಸೂರು: ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗೆ ಕಾಲೇಜಿನ ಆವರಣದಲ್ಲಿ ಹೃದಯಘಾತ ಸಂಭವಿಸಿ ಎರಡು ಬಾರಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಯರಗನಹಳ್ಳಿಯ ವೈ.ಕೆ. ಮಾದೇಶ್ ಮೃತಪಟ್ಟ ವಿದ್ಯಾರ್ಥಿ. ಮೈಸೂರಿನಲ್ಲಿ ಬಿಎಸ್ಸಿ ಓದುತ್ತಿದ್ದ ಅಕ್ಕನೊಂದಿಗೆ ಮನೆ ಮಾಡಿಕೊಂಡು ಮಾದೇಶ್ ಪಿಯುಸಿ ಓದುತ್ತಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ತರಗತಿಯಿಂದ ಹೊರಬಂದ ಮಾದೇಶ್ ಕಾಲೇಜು ಆವರಣದಲ್ಲಿಯೇ ಕುಸಿದು ಬಿದ್ದಿದ್ದಾರೆ. ಹಿಂದಿನಿಂದ ಬರುತ್ತಿದ್ದ ವಿದ್ಯಾರ್ಥಿಗಳು ಆತನನ್ನು ಮೇಲೆ ಎತ್ತಿದ್ದಾರೆ. ಒಂದೆರಡು ಹೆಜ್ಜೆ ಹಾಕಿದ ಮಾದೇಶ್ ಮತ್ತೆ ಕುಸಿದು ಬಿದ್ದಿದ್ದಾರೆ.
ವಿದ್ಯಾರ್ಥಿಗಳು ಮತ್ತು ಕಾಲೇಜಿನ ಸಿಬ್ಬಂದಿ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪೋಷಕರಿಗೂ ಕರೆ ಮಾಡಿ ಮಾಹಿತಿ ನೀಡಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದರೂ ಮಾದೇಶ್ ಬದುಕುಳಿದಿಲ್ಲ. ಮಾದೇಶ್ ಗೆ ಹೃದಯದಲ್ಲಿ ರಂಧ್ರ ಪತ್ತೆಯಾಗಿದ್ದರಿಂದ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ಹೇಳಲಾಗಿದೆ.
ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಯಲ್ಲಿ 609 ಅಂಕ ಗಳಿಸಿದ್ದ ಮಾದೇಶ್ ದ್ವಿತೀಯ ಪಿಯುಸಿ ಓದುತ್ತಿದ್ದರು. ಹೃದಯಾಘಾತದಿಂದ ಕುಸಿದು ಬಿದ್ದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

