ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ 7 ತಾಲೂಕುಗಳಲ್ಲಿ ಸಮನ್ವಯ ಶಿಕ್ಷಣ ಯೋಜನೆಯಡಿ ಖಾಲಿ ಇರುವ ಬಿಐಆರ್‌ಟಿ (ಪ್ರಾಥಮಿಕ ಮತ್ತು ಪ್ರೌಢಶಾಲೆ) ಹುದ್ದೆಗಳಿಗೆ ನೇರ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2026-27ನೇ ಸಾಲಿಗೆ ಮಂಜೂರಾದ ಈ ಹುದ್ದೆಗಳಿಗೆ ನಿಗದಿತ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅಗತ್ಯ ಪೂರಕ ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 18/06/2026 ರಂದು ಸಂಜೆ 5:30 ರೊಳಗಾಗಿ ಉಪನಿರ್ದೇಶಕರು (ಆಡಳಿತ) ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ, ಶಿವಮೊಗ್ಗ ಇಲ್ಲಿಗೆ ಸಲ್ಲಿಸಲು ಕೋರಲಾಗಿದೆ. ಅರ್ಜಿಯಲ್ಲಿ ಅಭ್ಯರ್ಥಿಗಳು ತಮ್ಮ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಿರುತ್ತದೆ.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ:
ಪ್ರಾಥಮಿಕ ಹಂತ (1 ರಿಂದ 5ನೇ ತರಗತಿ): ಆರ್‌ಸಿಐ ಅನುಮೋದಿತ ಸಂಸ್ಥೆಯಿಂದ ವಿಶೇಷ ಶಿಕ್ಷಣದಲ್ಲಿ ಡಿ.ಎಡ್ ಪದವಿ ಹಾಗೂ ಮಾನ್ಯ ಆರ್‌ಸಿಐ ಸಿಆರ್‌ಆರ್ ಸಂಖ್ಯೆ ಹೊಂದಿರಬೇಕು. ಅಥವಾ ವಿಶೇಷ ಶಿಕ್ಷಣದಲ್ಲಿ ಡಿ.ಎಡ್‌ಗೆ ಸಮಾನವಾದ ಡಿ.ಇ.ಐ.ಎಡ್ ಮತ್ತು ಆರ್‌ಸಿಐ ಸಿಆರ್‌ಆರ್ ಸಂಖ್ಯೆ ಹೊಂದಿರಬೇಕು ಹಾಗೂ ಅಂತರ್ಗತ ಶಿಕ್ಷಣದಲ್ಲಿ ಅಡ್ಡ ಅಂಗವಿಕಲತೆ ಕ್ಷೇತ್ರದಲ್ಲಿ 6 ತಿಂಗಳ ಬೋಧನಾ ತರಬೇತಿ ಪಡೆದಿರಬೇಕು.
ಪ್ರೌಢಶಾಲಾ ಹಂತ (7 ರಿಂದ 12 ನೇ ತರಗತಿ ): ಆರ್‌ಸಿಐ ಅನುಮೋದಿತ ಸಂಸ್ಥೆಯಿಂದ ವಿಶೇಷ ಶಿಕ್ಷಣದಲ್ಲಿ ಬಿ.ಎಡ್ ಪದವಿ ಮತ್ತು ಮಾನ್ಯ ಆರ್‌ಸಿಐ ಸಿಆರ್‌ಆರ್ ಸಂಖ್ಯೆ ಹೊಂದಿರಬೇಕು. ಅಥವಾ ವಿಶೇಷ ಶಿಕ್ಷಣದಲ್ಲಿ ವಿಶೇಷ ಬಿ.ಎಡ್‌ಗೆ ಸಮಾನವಾದ ಮಾನ್ಯತೆ ಪಡೆದ ವಿದ್ಯಾರ್ಹತೆಯೊಂದಿಗೆ ಬಿ.ಎಡ್ ಪದವಿ ಮತ್ತು ಆರ್‌ಸಿಐ ಸಿಆರ್‌ಆರ್ ಸಂಖ್ಯೆ ಹೊಂದಿರಬೇಕು ಹಾಗೂ ಅಂತರ್ಗತ ಶಿಕ್ಷಣದಲ್ಲಿ ಅಡ್ಡ ಅಂಗವಿಕಲತೆ ಕ್ಷೇತ್ರದಲ್ಲಿ 6 ತಿಂಗಳ ಬೋಧನಾ ತರಬೇತಿ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗದ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ತಿಳಿಸಿದ್ದಾರೆ.

