ಬೆಂಗಳೂರು: ಡಾ.ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿಯಾಗಬೇಕು ಎಂಬ ಕನಸು, ಕನವರಿಕೆಯಿತ್ತು. ಈಬಾರಿಯಾದರೂ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ರಾಜಕೀಯ ಕಾರಣಗಳಿಂದಾಗಿ ಸಾಧ್ಯವಾಗಿಲ್ಲ. ಇದೇ ವಿಚಾರವಾಗಿ ಮಾತನಾಡಿದ ಪರಮೇಶ್ವರ್ ಮೂರು ಬಾರಿ ತನಗೆ ಮುಖ್ಯಮಂತ್ರಿಯಾಗುವ ಅವಕಾಶ ಕೈ ತಪ್ಪಿತು ಎಂದು ಹೇಳಿ ಭಾವುಕರಾದ ಘಟನೆ ನಡೆದಿದೆ.
ತುಮಕೂರಿನಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್, ಮೂರು ಬಾರಿ ನನಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿತು. ಕಾರಣಾಂತರಗಳಿಂದ, ಕೆಲ ರಾಜಕೀಯ ಕಾರಣಗಳಿಂದಾಗಿ ಮೂರು ಬಾರಿ ಸಿಎಂ ಆಗುವ ಅವಕಾಶ ತಪ್ಪಿತು ಎಂದು ಬೇಸರ ವ್ಯಕ್ತಪಡಿಸಿದರು.
2013ರಲ್ಲಿ ಚುನಾವಣೆಯಲ್ಲಿ ಸೋಲನುಭವಿಸಿದೆ ಹೀಗಾಗಿ ಸಿಎಂ ಸ್ಥಾನ ಕೈತಪ್ಪಿತು. ಅಂದು ನಾನು ಗೆದ್ದಿದ್ದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುತ್ತಿರಲಿಲ್ಲ. ಆದರೆ ನನ್ನ ಹಣೆಬರಹ ಅಂದು ನಾನು ಸೋತೆ ಹಾಗಾಗಿ ಸಿಎಂ ಆಗಲು ಆಗಲಿಲ್ಲ. 2018ರಲ್ಲಿ ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆದರು. ಅಂದು ಕೂಡ ಮಾತುಕತೆ ನಡೆದಿದ್ದರೆ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬಹುದಿತ್ತು. ಆದರೆ ಯಾವುದೋ ಕಾರಣಕ್ಕೆ ಸಾಧ್ಯವಾಗಲಿಲ್ಲ. ಈ ಬಾರಿ 2026ರಲ್ಲಿ ಸಿಎಂ ಸ್ಥಾನ ನೀಡುವ ನಿರೀಕ್ಷೆ ಇತ್ತು. ಆದರೆ ರಾಜಕೀಯ ಕಾರಣಗಳಿಂದ ಅದು ಕೂಡ ಸಾಧ್ಯವಾಗಲಿಲ್ಲ. ಹೀಗೆ ಮೂರು ಬಾರಿ ಸಿಎಂ ಸ್ಥಾನ ನನಗೆ ಕೈತಪ್ಪಿತು ಎಂದು ಹೇಳುತ್ತಾ ಭಾವುಕರಾದರು.
ಇಂದು ಸರ್ಕಾರದಲ್ಲಿ ನನಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಹೇಗಂದರೆ ಹಾಗೆ ನಾವು ನಡೆದುಕೊಳ್ಳಲ್ಲ. ಬಹಳ ಜವಾಬ್ದಾರಿಯುತ ಸ್ಥಾನ ನೀಡಿದ್ದಾರೆ. ಯಾವುದೇ ರೀತಿ ಕುಂದು ಬರದಂತೆ ಸರ್ಕಾರದಲ್ಲಿ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.

