ನೆಪೋಟಿಸಂ, ನೆಪೋ ಕಿಡ್ಸ್ ಎಂಬ ಪದ ಬಳಕೆ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಇದ್ದರೂ ಡಿಜಿಟಲ್ ಯುಗ ಬಂದ ಮೇಲೆ ಅದನ್ನು ಟ್ರೋಲ್‌ಗಾಗಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದ್ದು, ಪ್ರತಿಭೆ ಇರುವ ಅನೇಕ ಕಲಾವಿದರು ಸಿನಿಮಾ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದ ಒಂದೇ ಕಾರಣಕ್ಕೆ ನೆಪೋಟಿಸಂ ಟೀಕೆಗಳಿಗೆ ಸಿಲುಕಿಕೊಂಡಿದ್ದಾರೆ.
ಸದ್ಯ ಇದಕ್ಕೆ ತಾಜಾ ಉದಾಹರಣೆಯೆಂದರೆ ಅದು ಕಿಚ್ಚ ಸುದೀಪ್ ಅಕ್ಕನ ಮಗ, ಸೋದರಳಿಯ ಸಂಚಿತ್ ಸಂಜೀವ್. ಸಂಚಿತ್ ನಟಿಸಿರುವ ಮ್ಯಾಂಗೋ ಪಚ್ಚ ಕಳೆದ ಶುಕ್ರವಾರ ಬಿಡುಗಡೆಯಾಗಿ ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ನೋಡಿದ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನೇ ಪಡೆದುಕೊಳ್ಳುತ್ತಿದೆ.
ಒಂದೊಳ್ಳೆ ಕಥೆ, ಚಿತ್ರಕಥೆ ಇರುವ ಸಿನಿಮಾದಲ್ಲಿ ಸಂಚಿತ್ ಮೊದಲ ಬಾರಿಗೆ ನಟಿಸಿದ್ದಾರೆ ಎನ್ನುವ ಫೀಲ್ ಕೊಡದ ಮಟ್ಟಕ್ಕೆ ಮಾಗಿದ ನಟನ ಹಾಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗೆ ಚಿತ್ರ ಜನರಿಗೆ ಇಷ್ಟವಾದ ಕಾರಣ ಚಿತ್ರತಂಡ ಸಕ್ಸಸ್ ಮೀಟ್ ಕಾರ್ಯಕ್ರಮವನ್ನು ನಿನ್ನೆ ( ಜೂನ್ 6 ) ಹಮ್ಮಿಕೊಂಡಿತ್ತು.
ಚಿತ್ರಕ್ಕೆ ಸುದೀಪ್ ಪತ್ನಿ ಸಹ ಬಂಡವಾಳ ಹಾಕಿದ್ದು, ಸುದೀಪ್ ಸಹ ಹಾಜರಿದ್ದರು. ಈ ವೇಳೆ ಪತ್ರಕರ್ತರೊಬ್ಬರು ನಿಮ್ಮಲ್ಲಿ ಟ್ಯಾಲೆಂಟ್ ಇದ್ದರೂ ಸಹ ಹಲವಾರು ಮಂದಿ ನಿಮ್ಮನ್ನು ನೆಪೋಟಿಸಂ ಹೆಸರಿನಲ್ಲಿ ಟ್ರೋಲ್ ಮಾಡುತ್ತಿದ್ದಾರೆ, ಮ್ಯಾಂಗೋ ಪಚ್ಚ ಎಂದರೆ, ಅರೇ ಏನಪ್ಪ ಸುದೀಪ್ ಮಗಳು, ಸುದೀಪ್ ಅಕ್ಕನ ಮಗ ಬರೀ ನೆಪೋಟಿಸಂ ಆಯ್ತು ಎನ್ನುತ್ತಿದ್ದಾರೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಾರೆ.
ಇದಕ್ಕುತ್ತರಿಸಿದ ಸಂಚಿತ್ ಏನೇ ಮಾಡಿದರೂ ಆ ಟೀಕೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ, ಆದರೆ ನನಗೆ ನಾನು ಚೆನ್ನಾಗಿ ನಟಿಸಿದ್ದೇನೆ ಎಂಬ ನಂಬಿಕೆ ಇದೆ, ಎಲ್ಲೆಡೆ ಒಳ್ಳೆಯ ಪ್ರಶಂಸೆ ಬರುವಾಗ ಅಂತಹ ಕೆಟ್ಟ ಪ್ರತಿಕ್ರಿಯೆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಹೀಗೆ ಸಂಚಿತ್ ಬೇಸರದಿಂದ ಹೇಳುತ್ತಿರುವಾಗಲೇ ಮಾತು ಆರಂಭಿಸಿದ ಸುದೀಪ್ ‘ಈ ಪ್ರಶ್ನೆ ಎಲ್ಲರಿಗೂ ಕೇಳ್ತೀರಾ? ಹಾಗೆ ನೋಡಿದರೆ ಇದು ದೊಡ್ಮನೆಯಿಂದಲೇ ಸ್ಟಾರ್ಟ್ ಆಯ್ತಲ್ಲ, ಶಿವಣ್ಣ ಅವರಿಗೆ ನೀವು ಕೇಳಿಲಿಲ್ಲ. ನೆಪೋಟಿಸಂ ಎನ್ನುವುದು ಇದ್ದಿದ್ದರೆ ರಾಜ್‌ಕುಮಾರ್ ಮಕ್ಕಳಿಗೂ ನೀವು ಕೇಳಬೇಕಿತ್ತಲ್ಲ. ಅಂಬಾನಿಯವರನ್ನೂ ಕೇಳಬೇಕು, ಇದೇನಿದು ನಿಮ್ಮ ಆಸ್ತಿಯೆಲ್ಲ ಅವರಿಗೆ ಹೋಗ್ತಾ ಇದೆಯಲ್ಲ, ಬೇರೆಯವರಿಗೆ ಕೊಡಬೇಕು ಅಂತ ಕೇಳಿ. ಪ್ರತಿಯೊಬ್ಬರಿಗೂ ಕೇಳಬೇಕು, ಇದು ತಪ್ಪು. ಬಾಂಬೆಯಲ್ಲಿ ನೆಪೋಟಿಸಂ ಪದ ಹುಟ್ಟಿಕೊಂಡಿತು ಅಂತ ಕರ್ನಾಟಕಕ್ಕೂ ಅದನ್ನು ತರಬೇಡಿ. ನಮ್ಮಲ್ಲಿ ರಾಜ್‌ಕುಮಾರ್ ಕಾಲದಿಂದಲೇ ಕಲೆ ಒಲಿದು, ಯೋಗ್ಯತೆ ಇದ್ದು, ಕರ್ನಾಟಕದ ಜನತೆ ಅವರನ್ನು ಇಷ್ಟಪಟ್ಟರೆ ಇದು ಯಾರಪ್ಪನ ಜಾಗ ಬೇಕಾದರೂ ಆಗಬಹುದು. ಇಲ್ಲಿ ಕುಳಿತುಕೊಂಡು ಮುಂಬೈನ ಒಂದು ಪದವನ್ನು ಬಳಸುವುದು ತಪ್ಪಾಗುತ್ತೆ. ಇವತ್ತಿಗೆ ಶಿವರಾಜ್‌ಕುಮಾರ್ ಅವರು ಓರ್ವ ಮೇರುನಟರು, ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದೇವೆ, ಅವರನ್ನು ನೋಡಿ ಎಷ್ಟೋ ಜನ ಬೆಳೆಯುತ್ತಿದ್ದಾರೆ. ನಮ್ಮ ಮಧ್ಯ ಅಪ್ಪು ಅವರು ಇರದೇ ಇರಬಹುದು, ಅದ್ಭುತವಾದ ಪ್ರತಿಭೆ. ನೆಪೋಟಿಸಂ ಎಂಬುದು ಅವರಿಗೆ ಬರಕೂಡದು. ಅವರಿಂದ ಎಷ್ಟೋ ಜನ ಕಲಾವಿದರು ಬೆಳೆಯುತ್ತಿದ್ದಾರೆ. ನನ್ನ ಮನೆಯಲ್ಲಿ ಸಂಚಿತ್ ಬಿಟ್ಟು ಇನ್ನೂ ತುಂಬಾ ಜನ ಮಕ್ಕಳಿದ್ದಾರೆ, ಅವರು ಯಾರೂ ಚಿತ್ರರಂಗಕ್ಕೆ ಬಂದಿಲ್ಲ. ನನ್ನ ಮಗಳು ಚೆನ್ನಾಗಿ ಹಾಡು ಹೇಳ್ತಾಳೆ ಬಂದಿದ್ದಾಳೆ, ಇವನು ನಟನೆಯಲ್ಲಿ ಆಸಕ್ತಿ ಇದೆ ಬಂದಿದ್ದಾನೆ ಅಷ್ಟೇ. ನೆಪೋಟಿಸಂ ಎಂಬ ಪದ ನನಗೆ ಮೊದಲಿನಿಂದಲೂ ಆಗಲ್ಲ. ಆ ಪದದ ಅರ್ಥ ನಮ್ಮ ರಾಜ್ಯದಲ್ಲಿ ಎಷ್ಟೋ ಜನರಿಗೆ ಗೊತ್ತಿಲ್ಲ. ನಮ್ಮ ಕನ್ನಡಿಗರಿಗೆ ಗೊತ್ತಿರುವುದು ಒಂದೇ, ಕಲೆ. ಇದೆಯಾ ಬೆಳಿತಾರೆ ಅಷ್ಟೇ’ ಎಂದು ಹೇಳಿ ಪ್ರಶ್ನೆ ಕೇಳಿದವರು ಹಾಗೂ ನೆಪೋಟಿಸಂ ಎಂದು ಕಾಲೆಳೆಯುವವರಿಗೆ ಡೈರೆಕ್ಟ್ ಟಾಂಗ್ ಕೊಟ್ಟಿದ್ದಾರೆ.

