ಶಿವರಾಜ್ಕುಮಾರ್ ಸದ್ಯ ಕನ್ನಡ ಚಿತ್ರರಂಗ ಮಾತ್ರವಲ್ಲ ಸೌತ್ ಇಂಡಿಯನ್ ಸೂಪರ್ ಸ್ಟಾರ್ ಎನ್ನಬಹುದು. ಜೈಲರ್ ಚಿತ್ರದಲ್ಲಿ ನರಸಿಂಹನಾಗಿ ನಾಯಕ ನಟನಿಗಿಂತ ಹೆಚ್ಚು ಶಿಳ್ಳೆ, ಚಪ್ಪಾಳೆ ಬಿದ್ದಿದ್ದೇ ತಡ ದಕ್ಷಿಣ ಭಾರತ ಚಿತ್ರರಂಗದ ಪ್ರೇಕ್ಷಕರು ಶಿವಣ್ಣನನ್ನು ಆಗಿನಿಂದ ನೋಡುತ್ತಿರುವ ರೀತಿಯೇ ಬೇರೆ.
ಕೇವಲ ಪ್ರೇಕ್ಷಕರಲ್ಲ, ಬೇರೆ ಭಾಷೆಯ ಸ್ಟಾರ್ಗಳೂ ಸಹ ಶಿವಣ್ಣ ನಮ್ಮ ಚಿತ್ರದಲ್ಲಿ ನಟಿಸಿದರೆ ಚಂದ ಎಂದು ಕಾಲ್ಶೀಟ್ಗಾಗಿ ಶಿವಣ್ಣನ ಹಿಂದೆ ಬಿದ್ದಿದ್ದಾರೆ. ಅದೇ ಕಾರಣಕ್ಕೆ ಶಿವಣ್ಣ ತೆಲುಗು ಹಾಗೂ ತಮಿಳಿನ ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ಗುಮ್ಮಡಿ ನರಸಿಂಹಯ್ಯ ಎಂಬ ತೆಲುಗು ಚಿತ್ರಕ್ಕೆ ನಾಯಕನಾಗಿ ನಟಿಸಿ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿರುವ ಶಿವಣ್ಣ ಟೂರಿಸ್ಟ್ ಫ್ಯಾಮಿಲಿ ಚಿತ್ರದ ಪ್ರತಿಭಾವಂತ ನಿರ್ದೇಶಕ ಅಭಿಷನ್ ಜತೆ ತಮಿಳು ಚಿತ್ರವೊಂದರಲ್ಲಿ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗೆ ನಿಧಾನವಾಗಿ ಶಿವಣ್ಣ ಸೌತ್ ಸ್ಟಾರ್ ಆಗುತ್ತಿರುವುದು ಕನ್ನಡದ ಪ್ರೇಕ್ಷಕರಿಗೆ ಹಾಗೂ ಶಿವಣ್ಣ ಅಭಿಮಾನಿಗಳಿಗೆ ಸಂತಸ ತಂದಿದೆ.
ನಮ್ಮ ನಾಡಿನ ನಟನೊಬ್ಬ ದಕ್ಷಿಣ ಭಾರತದಾದ್ಯಂತ ಈ ಮಟ್ಟಿಗಿನ ಪ್ರೀತಿ, ಬೇಡಿಕೆ ಹಾಗೂ ಹೆಸರು ಮಾಡಿದ್ದು ಹೆಮ್ಮೆ ಎಂದು ಸಂತಸ ಹೊರಹಾಕಿದ್ದಾರೆ. ಈ ವಿಚಾರವಾಗಿ ಸಿನಿಮಾ ಎಕ್ಸ್ಪ್ರೆಸ್ ಎಂಬ ಯುಟ್ಯೂಬ್ ಚಾನೆಲ್ನಲ್ಲಿನ ಸಂದರ್ಶನದಲ್ಲಿ ಮಾತನಾಡಿದ ಶಿವಣ್ಣ ಎಲ್ಲ ಭಾಷೆಯ ಪ್ರೇಕ್ಷಕರು ಪರಭಾಷೆಯ ನಟರನ್ನು ಅವರ ಪಾತ್ರಗಳಿಂದ ಇಷ್ಟಪಡುತ್ತಿದ್ದಾರೆ, ಪ್ಯಾನ್ ಇಂಡಿಯಾ ಯುಗವಿದು, ಹೀಗಾಗಿ ಬೇರೆ ಭಾಷೆಯ ಚಿತ್ರಗಳನ್ನೂ ಸಹ ಗೌರವಿಸಬೇಕು ಎಂದಿದ್ದಾರೆ.
ಇದೇ ವೇಳೆ ತಮ್ಮಲ್ಲಿನ ಅಸಮಾಧಾನ ಹೊರಹಾಕಿದ ಶಿವಣ್ಣ ಹೀಗಿರುವಾಗ ಥಿಯೇಟರ್ ಸಮಸ್ಯೆ, ಬೇರೆ ಏನಾದರೂ ಸಮಸ್ಯೆ ಆದಾಗ ನನ್ನ ಬಳಿ ಬಂದು ಪ್ರತಿಕ್ರಿಯೆ ಕೇಳುತ್ತಾರೆ, ಇದಕ್ಕೆ ನಾನು ಏನು ಮಾಡಬೇಕು, ಅದಕ್ಕೆಂದೇ ಚಲನಚಿತ್ರ ವಾಣಿಜ್ಯ ಮಂಡಳಿಗಳಿವೆ, ಅವರು ನೋಡಿಕೊಳ್ತಾರೆ, ಅದನ್ನು ಬಿಟ್ಟು ನನ್ನನ್ನು ಬಂದು ಕೇಳಿದರೆ ಏನು ಹೇಳುವುದು, ಅದು ಸರಿಯಲ್ಲ ಎಂದು ಅಸಮಾಧಾನಗೊಂಡಿದ್ದಾರೆ.
ನಾನು ತಪ್ಪು ಮಾಡಿದ್ರೆ ಆ ದೇವರೇ ನೋಡಿಕೊಳ್ತಾನೆ. ಆ ರೀತಿ ಇದ್ದಿದ್ರೆ ಕಳೆದ ಒಂದು ವರ್ಷದಲ್ಲಿ ಏನೆಲ್ಲ ವಿವಾದ ಆಯ್ತು, ನಮಗೆ ಒಳ್ಳೆಯದ್ದೇ ಆಗ್ತಿದಿಯಲ್ಲ ಎಂದು ಶಿವಣ್ಣ ಕೋಪದಿಂದ ಮಾತನಾಡಿದ್ದಾರೆ.
ಇನ್ನು ಪ್ರಿಂಟ್ ಮೀಡಿಯಾಗಳು ಈ ರೀತಿ ಮಾಡುವುದಿಲ್ಲ, ಆದರೆ ಸ್ಯಾಟಲೈಟ್ ಮೀಡಿಯಾಗಳು ಈ ರೀತಿಯ ಕೆಲಸ ಮಾಡುತ್ತಿದ್ದಾರೆ ಎಂದು ನೇರವಾಗಿಯೇ ಮಾತನಾಡಿದ ಶಿವಣ್ಣ ನಾನು ನೇರವಾಗಿಯೇ ಮಾತನಾಡುತ್ತೇನೆ, ಏಕೆಂದರೆ ನಾನು ಸತ್ಯ ಹೇಳುತ್ತೇನೆ ಎಂದು ಕಿಡಿಕಾರಿದ್ದಾರೆ.

