ಕನ್ನಡಿಗರ ರಾಜಧಾನಿ ಬೆಂಗಳೂರು ಮತ್ತೊಂದು ಚುನಾವಣೆಗೆ ಸದ್ದೇ ಇಲ್ಲದೆ ಸಜ್ಜಾಗುತ್ತಿದೆ, ಬೆಂಗಳೂರು ಈಗ ಇಡೀ ಜಗತ್ತು ತಿರುಗಿ ನೋಡುವಂತೆ ಬೆಳೆದು ನಿಂತಿದೆ. ಹೀಗೆ ನಮ್ಮ ಬೆಂಗಳೂರಿನ ಬೇಕು & ಬೇಡ ನೋಡಲು ಸ್ಥಳೀಯ ಜನಪ್ರತಿನಿಧಿಗಳು ಅತ್ಯಗತ್ಯ. ಆದರೆ ಜನಪ್ರತಿನಿಧಿಗಳು ಇಲ್ಲದೆ ಬೆಂಗಳೂರು ಸ್ಥಳೀಯ ಸಂಸ್ಥೆಗಳು 6 ವರ್ಷ ಕಳೆದಿವೆ. ಹೀಗಿದ್ದಾಗ ಬೆಂಗಳೂರು ಮಹಾನಗರ ಪಾಲಿಕೆ ಈಗ ಜಿಬಿಎ ಆಗಿ ಬದಲಾಗಿದೆ, ಬಿಬಿಎಂಪಿಗೆ ಹೊಸ ರೂಪವನ್ನ ನೀಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ಕೂಡ ನಡೆಯಲಿದೆ. ಅದರಲ್ಲೂ ಜಿಬಿಎ ಚುನಾವಣೆ & ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಚುನಾವಣಾ ರಣತಂತ್ರದ ಬಗ್ಗೆ ತಿಳಿಯೋಣ ಬನ್ನಿ.
ಸಿದ್ದರಾಮಯ್ಯ ಅವರ ಸರ್ಕಾರ ಕೆಲ ದಿನಗಳ ಹಿಂದಷ್ಟೇ ಜಿಬಿಎ ಚುನಾವಣೆ ನಡೆಸಲು 3 ತಿಂಗಳ ಕಾಲಾವಕಾಶ ಕೇಳಿ ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿತ್ತು. ಆದರೆ ಈ ರೀತಿಯಾಗಿ 3 ತಿಂಗಳ ಕಾಲಾವಕಾಶ ಕೇಳಿದ್ದ ರಾಜ್ಯ ಸಕಾ೯ರಕ್ಕೆ 2 ತಿಂಗಳ ರಿಲೀಫ್ ಸಿಕ್ಕಿತ್ತು. ಅಲ್ಲದೆ ಈ ವಿಚಾರದಲ್ಲಿ ಮಾನ್ಯ ಸುಪ್ರೀಂಕೋರ್ಟ್ ಮಹತ್ವದ ಆದೇಶವನ್ನು ಕೂಡ ನೀಡಿದ್ದು, 2026ರ ಆಗಸ್ಟ್ 31ರ ಒಳಗೆ ಎಲೆಕ್ಷನ್ ನಡೆಸಲು ಸುಪ್ರೀಂ ಆದೇಶಿಸಿದೆ.

ಅಲ್ಲದೆ ಚುನಾವಣೆ ಮುಂದೂಡಿಕೆಗೆ ಕಾಲಾವಕಾಶ ಕೇಳಿ ಮತ್ತೊಮ್ಮೆ ಅಜಿ೯ ಸಲ್ಲಿಸದಂತೆಯು ತಾಕೀತು ಮಾಡಿದೆ. ಹೀಗಿದ್ದಾಗಲೇ ಕರ್ನಾಟಕ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಯನ್ನು ನಡೆಸಬೇಕಾದ ಅನಿವಾರ್ಯತೆಯಲ್ಲಿದೆ. ಮತ್ತೊಂದೆಡೆ ರಾಜ್ಯದಲ್ಲಿ ಸಿಎಂ ಸ್ಥಾನ ಕೂಡ ಬದಲಾಗಿದ್ದು, ಅತ್ತ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ನಂತರ ಡಿ.ಕೆ. ಶಿವಕುಮಾರ್ ಅವರ ಎಂಟ್ರಿ ಆಗಿದೆ. ಪ್ರಸ್ತುತ ಇರುವ ಮತದಾರರ ಪಟ್ಟಿಯಲ್ಲೇ ಜಿಬಿಎ ಚುನಾವಣೆ ನಡೆಸಲು ಕೊನೆಯ ಹಂತದ ಸಿದ್ಧತೆ ಸಾಗಿವೆ. ಹಾಗಾದ್ರೆ ಕಾಂಗ್ರೆಸ್ ಈಗ ಡಿ.ಕೆ. ಶಿವಕುಮಾರ್ ಅವರ ಸಾರಥ್ಯದಲ್ಲಿ ಯಾವ ರಣತಂತ್ರ ಹೂಡಲಿದೆ? ಮುಂದೆ ಓದಿ.
ಸಿಎಂ ಡಿಕೆಶಿ ಚುನಾವಣಾ ರಣತಂತ್ರ!
ಬೆಂಗಳೂರಿನ ಜೊತೆಗೆ ಗಟ್ಟಿಯಾದ ನಂಟು ಹೊಂದಿರುವ ಡಿ.ಕೆ. ಶಿವಕುಮಾರ್ ಅವರು ಇದೀಗ ಸಿಎಂ ಆಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಪ್ಲಸ್ ಪಾಯಿಂಟ್ ಎನ್ನಬಹುದು. ಏಕೆಂದರೆ ಬೆಂಗಳೂರಿನ ನಾಡಿಮಿಡಿತ & ಮಹಾನಗರದ ಮತದಾರರ ಅಗತ್ಯತೆಗಳ ಬಗ್ಗೆ ಡಿ.ಕೆ. ಶಿವಕುಮಾರ್ ಅವರಿಗೆ ಸ್ಪಷ್ಟತೆ ಇದೆ. ಈ ಪರಿಸ್ಥಿತಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದರೆ ಜಿಬಿಎ ಅಡಿ ಬರುವ 5 ಪಾಲಿಕೆಗಳ ಪೈಕಿ ಕನಿಷ್ಠ 4 ಪಾಲಿಕೆಗಳಲ್ಲಿ ಜಯ ಸಾಧಿಸಲು ಇದೀಗ ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದೆ. ಪ್ರಮುಖವಾಗಿ ಹೈಕಮಾಂಡ್ ನಾಯಕರಿಗೆ ಕೂಡ ಜಿಬಿಎ ಚುನಾವಣೆ ಪ್ರಮುಖವಾಗಿದ್ದು, ಎಲ್ಲಾ ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸಲು ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಸೂಚನೆ ಕೂಡ ಸಿಕ್ಕಿದೆ.
2026 ಆಗಸ್ಟ್ ಅಂತ್ಯಕ್ಕೆ ಚುನಾವಣೆ?
ಸೆಪ್ಟೆಂಬರ್ 2020ರ ನಂತರ ಬಿಬಿಎಂಪಿ ಅಧಿಕಾರದ ಅವಧಿಯು ಪೂರ್ಣಗೊಂಡು, ಹೊಸದಾಗಿ ಚುನಾವಣೆ ನಡೆಸಬೇಕಾದ ಅಗತ್ಯತೆ ಇತ್ತು. ಆದರೆ ಆಗಿನ ಬಿಜೆಪಿ ಸರ್ಕಾರ ಕೊರೊನಾ ಕಾರಣವನ್ನು ನೀಡಿ, ಚುನಾವಣೆ ಮುಂದೆ ಹಾಕಿತ್ತು ಎಂಬುದು ಕಾಂಗ್ರೆಸ್ ನಾಯಕರ ಮಾತು. ಹೀಗಿದ್ದಾಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಕೂಡ ಮತ್ತಷ್ಟು ವರ್ಷಗಳ ಕಾಲ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಮುಂದಕ್ಕೆ ಹೋಗಿ ಜನರು ಕೂಡ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಹೀಗಿದ್ದಾಗ ಜಿಬಿಎ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹೊಸ ಹೊಸ ತಂತ್ರಗಳನ್ನು ಪ್ರಯೋಗ ಮಾಡುವ ನಿರೀಕ್ಷೆ ಇದೆ. ಪ್ರಮುಖವಾಗಿ ಮಹಾನಗರ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮುಕ್ತಿ ಹಾಡುವ ಜೊತೆಗೆ, ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ ಕಡೆಗೆ ಕೂಡ ಗಮನ ನೀಡುವ ಎಲ್ಲಾ ಮುನ್ಸೂಚನೆ ಈಗ ಸಿಗುತ್ತಿದೆ. ಎಲ್ಲವೂ ಅಂದುಕೊಂಡ ರೀತಿಯಲ್ಲೇ ನಡೆದರೆ 2026 ಆಗಸ್ಟ್ ಅಂತ್ಯಕ್ಕೆ ಜಿಬಿಎ ಚುನಾವಣೆಯು ಮುಗಿದು, ಫಲಿತಾಂಶವು ಕೂಡ ಹೊರಬೀಳುವ ನಿರೀಕ್ಷೆ ಇದೆ. ಆದರೆ ಇದಕ್ಕೆ ಪ್ರತಿಯಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೂಡ ಪ್ರತಿತಂತ್ರ ಹೆಣೆಯುತ್ತಿದ್ದಾರೆ.

