ಘಾಜಿಯಾಬಾದ್: ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ, ಏಷ್ಯನ್ ಪ್ಯಾರಾ ಗೇಮ್ಸ್‌ಗೆ ಆಯ್ಕೆಯಾಗಿದ್ದ ರಾಷ್ಟ್ರೀಯ ಮಟ್ಟದ ಪ್ಯಾರಾ ಅಥ್ಲೀಟ್ ಚಿರಾಗ್ ತ್ಯಾಗಿ (25) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನದೆದಿದೆ.
ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಚಿರಾಗ್ ತ್ಯಾಗಿಯನ್ನು ಹತ್ಯೆ ಮಾಡಲಾಗಿದೆ. ಚಿರಾಗ್ ತ್ಯಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಕ್ಟೋಬರ್‌ನಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಪ್ಯಾರಾ ಏಷ್ಯನ್ ಗೇಮ್ಸ್ ಗೆ ಅರ್ಹತೆ ಪಡೆದಿದ್ದರು.
ಬುಧವಾರ ಬೆಳಗ್ಗೆ ಚಿರಾಗ್ ತಮ್ಮ ಕುಟುಂಬದವರಿಗೆ ಕರೆ ಮಾಡಿ ಮಧ್ಯಾಹ್ನ 3:30ರೊಳಗೆ ಮನೆಗೆ ಬರುವುದಾಗಿ ತಿಳಿಸಿದ್ದರು. ಆದರೆ ಆ ಬಳಿಕ ಅವರು ಮನೆಗೆ ಬಂದಿರಲಿಲ್ಲ, ಅವರ ಮೊಬೈಲ್ ಕೂಡ ಸ್ವಿಚ್‌ಆಫ್ ಆಗಿತ್ತು.
ಕುಟುಂಬದವರು ಆತಂಕಗೊಂಡು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ಶನಿವಾರ ಘಾಜಿಯಾಬಾದ್‌ನ ಸಾಯಿ ಕುಂಜ್ ಪ್ರದೇಶದಲ್ಲಿ ಚಿರಾಗ್ ಅವರ ಮೃತದೇಹ ಪತ್ತೆ ಹಚ್ಚಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅವರಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ತನಿಖೆ ನಡೆಸಿದ ಪೊಲೀಸರಿಗೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಅವರ ರೂಮ್ ಮೇಟ್ ಹಾಗೂ ಸ್ನೇಹಿತನೇ ಈ ಕೃತ್ಯವೆಸಗಿರುವುದು ವಿಚಾರಣೆಯಲ್ಲಿ ಬಯಲಾಗಿದೆ.
ಯಶ್ ಖಾಟಿಕ್ ಎಂಬಾತನೇ ಚಿರಾಗ್ ತ್ಯಾಗಿಗೆ ಬಿನ್ನೆಗೆ ಗುಂಡಿಕ್ಕಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಯಶ್ ಖಾಟಿಕ್ ಮತ್ತು ಚಿರಾಗ್ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಇಬ್ಬರೂ ದೃಷ್ಟಿಹೀನರ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಒಟ್ಟಿಗೆ ತರಬೇತಿ ಪಡೆದಿದ್ದ ಅವರು ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದರು.
ಯಶ್ ಖಾಟಿಕ್ ವಿಚಾರಣೆ ವೇಳೆ ಮಹತ್ವದ ಮಾಹಿತಿ ಬಹಿರಂಗವಾಗಿದ್ದು, ಯಶ್ ಖಾಟಿಕ್ ಅವರ ದಾಖಲೆಗಳ ಪರಿಶೀಲನೆ ಕುರಿತು ಚಿರಾಗ್ ಈ ಹಿಂದೆ ದೂರು ನೀಡಿದ್ದರು. ಇದರಿಂದ ಯಶ್ ಅನರ್ಹಗೊಂಡಿದ್ದ ಎನ್ನಲಾಗಿದೆ. ಈ ದ್ವೇಷದ ಹಿನ್ನೆಲೆಯಲ್ಲಿ ಚಿರಾಗ್ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡ ಯಶ್, ಅವರ ಬೆನ್ನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಹತ್ಯೆಗೆ ಬಳಸಿದ ಪಿಸ್ತೂಲ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

