ಸಂಜೆ ವೇಳೆ ಚಹಾ ಅಥವಾ ಕಾಫಿ ಜೊತೆ ಏನಾದರೂ ವಿಭಿನ್ನವಾಗಿ ಹಾಗೂ ಬಾಯಿ ಚಪ್ಪರಿಸುವಂತಹ ತಿಂಡಿ ತಿನ್ನಬೇಕು ಅನಿಸಿದರೆ ಇಂಡೋ ಮೆಕ್ಸಿಕನ್ ಶೈಲಿಯ ಪನೀರ್ ಟಾಕೋಸ್ ಅತ್ಯುತ್ತಮ ಆಯ್ಕೆಯಾಗಿದೆ. ಮಸಾಲೆ ಭರಿತ, ಹುಳಿ ಮತ್ತು ಕ್ರೀಮಿ ರುಚಿಯ ಮಿಶ್ರಣವಾಗಿರುವ ಈ ಖಾದ್ಯವು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಹೋಟೆಲ್ ತರಹದ ರುಚಿಯನ್ನು ನೀಡುವ ಈ ವಿಶೇಷ ತಿಂಡಿಯನ್ನು ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
ಪನೀರ್ ಮಿಶ್ರಣ ಮಾಡಲು:
- ಚೌಕಾಕಾರವಾಗಿ ಕತ್ತರಿಸಿದ ಪನೀರ್ – ಒಂದು ಕಪ್
- ಕೆಂಪು ದಪ್ಪ ಮೆಣಸಿನಕಾಯಿ – ಒಂದು
- ಹಸಿರು ದಪ್ಪ ಮೆಣಸಿನಕಾಯಿ – ಒಂದು
- ಹಳದಿ ದಪ್ಪ ಮೆಣಸಿನಕಾಯಿ – ಒಂದು
- ಟಾಕೋ ಮಸಾಲಾ – ಎರಡು ದೊಡ್ಡ ಚಮಚ
- ನಿಂಬೆ ರಸ – ಎರಡು ದೊಡ್ಡ ಚಮಚ
- ನೀರು – ಎರಡು ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಬೇಸ್ ಮಾಡಲು: ರೊಟ್ಟಿ ಅಥವಾ ಚಪಾತಿ – ಹನ್ನೆರಡು
ವಿಶೇಷ ಕ್ರೀಮಿ ಚಟ್ನಿ ಮಾಡಲು:
- ಗಟ್ಟಿ ಮೊಸರು – ಒಂದು ಕಪ್
- ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್
- ಹಸಿರು ಮೆಣಸಿನಕಾಯಿ – ಎರಡು
- ಬೆಳ್ಳುಳ್ಳಿ ಎಸಳು – ಎರಡು
- ಉಪ್ಪು – ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಮೊದಲು ಒಂದು ದೊಡ್ಡ ಪಾತ್ರೆಯಲ್ಲಿ ಎಣ್ಣೆ, ನಿಂಬೆ ರಸ, ಟಾಕೋ ಮಸಾಲಾ ಮತ್ತು ಎರಡು ಚಮಚ ನೀರು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಈ ಮಿಶ್ರಣಕ್ಕೆ ಕತ್ತರಿಸಿದ ಪನೀರ್ ತುಂಡುಗಳು ಮತ್ತು ಮೂರು ಬಣ್ಣದ ದಪ್ಪ ಮೆಣಸಿನಕಾಯಿಗಳನ್ನು ಹಾಕಿ, ಮಸಾಲೆ ಎಲ್ಲದಕ್ಕೂ ಸರಿಯಾಗಿ ಅಂಟಿಕೊಳ್ಳುವಂತೆ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು ಕನಿಷ್ಠ ಒಂದು ಗಂಟೆಯ ಕಾಲ ಫ್ರಿಡ್ಜ್ನಲ್ಲಿ ಇಡಬೇಕು.
ಒಂದು ಗಂಟೆಯ ನಂತರ ಈ ಮಿಶ್ರಣವನ್ನು ಫ್ರಿಡ್ಜ್ನಿಂದ ಹೊರಗೆ ತೆಗೆಯಿರಿ. ಈಗ ಸ್ಟವ್ ಮೇಲೆ ಒಂದು ಪ್ಯಾನ್ ಇಟ್ಟು ಕಾಯಿಸಿ, ಸ್ವಲ್ಪ ಎಣ್ಣೆ ಸಿಂಪಡಿಸಿ. ಮಸಾಲೆ ಹಚ್ಚಿದ ಪನೀರ್ ಮತ್ತು ತರಕಾರಿ ಮಿಶ್ರಣವನ್ನು ಪ್ಯಾನ್ಗೆ ಹಾಕಿ ಹರಡಿ. ಮಧ್ಯಮ ಉರಿಯಲ್ಲಿ ನಾಲ್ಕರಿಂದ ಐದು ನಿಮಿಷಗಳ ಕಾಲ ಪನೀರ್ ತಿಳಿ ಕಂದು ಬಣ್ಣಕ್ಕೆ ಬರುವವರೆಗೆ ಮತ್ತು ತರಕಾರಿಗಳು ಸ್ವಲ್ಪ ಕ್ರಿಸ್ಪಿ ಆಗುವವರೆಗೆ ಹುರಿದು ಪಾತ್ರೆಯನ್ನು ಕೆಳಗಿಳಿಸಿ. ಈಗ ಟಾಕೋಗೆ ಬೇಕಾದ ಮುಖ್ಯ ಸ್ಟಫಿಂಗ್ ಸಿದ್ಧವಾಗಿದೆ.
ಇದೇ ಸಮಯದಲ್ಲಿ ಒಂದು ಮಿಕ್ಸಿ ಜಾರ್ಗೆ ಗಟ್ಟಿ ಮೊಸರು, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಂಡರೆ ರುಚಿಕರವಾದ ಕ್ರೀಮಿ ಚಟ್ನಿ ಸಿದ್ಧವಾಗುತ್ತದೆ.
ಕೊನೆಯದಾಗಿ ಮಾಡಿಟ್ಟುಕೊಂಡ ರೊಟ್ಟಿ ಅಥವಾ ಚಪಾತಿಗಳನ್ನು ಒಲೆಯ ಮೇಲೆ ಸ್ವಲ್ಪ ಬಿಸಿ ಮಾಡಿಕೊಳ್ಳಿ. ನಂತರ ಪ್ರತಿ ರೊಟ್ಟಿಯ ಮಧ್ಯಭಾಗಕ್ಕೆ ಸಿದ್ಧಪಡಿಸಿದ ಪನೀರ್ ಮತ್ತು ತರಕಾರಿ ಮಿಶ್ರಣವನ್ನು ಇಟ್ಟು, ಅದರ ಮೇಲೆ ಈ ಕ್ರೀಮಿ ಚಟ್ನಿಯನ್ನು ಸವರಿದರೆ ಬಿಸಿಬಿಸಿಯಾದ ಪನೀರ್ ಟಾಕೋಸ್ ಸವಿಯಲು ಸಿದ್ಧವಾಗುತ್ತದೆ.

