ಖ್ಯಾತ ನಿರ್ದೇಶಕ ಎಸ್. ಎಸ್. ರಾಜಮೌಳಿ ಮತ್ತು ಸೂಪರ್ ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಆದರೆ, ಈ ನಡುವೆ ಚಿತ್ರತಂಡಕ್ಕೆ ಲೀಕ್ ಕಿರಿಕಿರಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಚಿತ್ರದ ಪ್ರಮುಖ ದೃಶ್ಯಗಳು ಒಂದರ ಹಿಂದೆ ಒಂದರಂತೆ ಇಂಟರ್ನೆಟ್‌ನಲ್ಲಿ ಸೋರಿಕೆಯಾಗುತ್ತಿರುವುದರಿಂದ, ಎಚ್ಚೆತ್ತುಕೊಂಡಿರುವ ಚಿತ್ರದ ನಿರ್ಮಾಪಕರು ವಾರಣಾಸಿ ಶೂಟಿಂಗ್ ಸೆಟ್‌ನಲ್ಲಿ ಭದ್ರತೆಯನ್ನು ಈಗ ಮತ್ತಷ್ಟು ಬಿಗಿಗೊಳಿಸಿದ್ದಾರೆ.
ಕೆಲವು ತಿಂಗಳುಗಳ ಹಿಂದಷ್ಟೇ ವಾರಣಾಸಿ ಶೆಡ್ಯೂಲ್‌ನಲ್ಲಿ ಮಹೇಶ್ ಬಾಬು ಮತ್ತು ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಒಟ್ಟಿಗೆ ಇರುವ ವಿಡಿಯೋವೊಂದು ಆನ್‌ಲೈನ್‌ನಲ್ಲಿ ಹರಿದಾಡಿತ್ತು. ಇದರಿಂದ ತೀವ್ರ ಬೇಸರಗೊಂಡಿದ್ದ ರಾಜಮೌಳಿ, ಚಿತ್ರತಂಡದ ಸಿಬ್ಬಂದಿಗೆ ಕಠಿಣ ಎಚ್ಚರಿಕೆ ನೀಡಿದ್ದರು. ಇನ್ನು ಮುಂದೆ ಇಂತಹ ತಪ್ಪುಗಳು ಮರುಕಳಿಸಬಾರದು ಎಂದು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದರು.
ಆದರೆ, ರಾಜಮೌಳಿ ಹಾಕಿದ್ದ ಕಠಿಣ ನಿಯಮಗಳ ನಡುವೆಯೂ ಈಗ ಉಗ್ರಭಟ್ಟಿ ಗುಹೆಗಳ (Ugrabhatti Caves) ಸೆಟ್‌ನಿಂದ ಹೊಸ ದೃಶ್ಯಗಳು ಮತ್ತೊಮ್ಮೆ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸದ್ಯ ಸೋರಿಕೆಯಾಗಿರುವ ಈ ದೃಶ್ಯಗಳು ಸಿನಿಮಾದ ಕಥೆಗೆ ಅತ್ಯಂತ ಪ್ರಮುಖ ಹಾಗೂ ದಿಕ್ಸೂಚಿಯಾಗಿದ್ದವು ಎಂದು ಹೇಳಲಾಗುತ್ತಿದೆ. ಚಿತ್ರದ ಪ್ರಮುಖ ಸಸ್ಪೆನ್ಸ್ ದೃಶ್ಯಗಳೇ ಹೀಗೆ ಬಹಿರಂಗವಾಗುತ್ತಿರುವುದು ಚಿತ್ರತಂಡದಲ್ಲಿ ತೀವ್ರ ಆತಂಕ ಮೂಡಿಸಿದೆ.
ಹೀಗಾಗಿ ಚಿತ್ರದ ಪ್ರಮುಖ ಸೀನ್‌ಗಳು ಮತ್ತು ಚಿತ್ರೀಕರಣದ ಶೈಲಿ ರಿವೀಲ್ ಆಗದಂತೆ ತಡೆಯಲು ಸೆಟ್‌ಗೆ ಮೊಬೈಲ್ ತರುವುದನ್ನು ನಿಷೇಧಿಸುವುದು ಸೇರಿದಂತೆ ಹಲವು ಕಠಿಣ ಪ್ರೋಟೋಕಾಲ್‌ಗಳನ್ನು ಜಾರಿಗೆ ತರಲಾಗಿದೆ. ಜಗತ್ತಿನಾದ್ಯಂತ ಸಂಚರಿಸುವ ಕಥಾಹಂದರ ಹೊಂದಿರುವ ಈ ಅಡ್ವೆಂಚರ್ ಆಕ್ಷನ್ ಸಿನಿಮಾವನ್ನು ಒಡಿಶಾ, ಆಫ್ರಿಕಾ ಮತ್ತು ಹೈದರಾಬಾದ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಅದ್ದೂರಿಯಾಗಿ ಚಿತ್ರೀಕರಿಸಲಾಗುತ್ತಿದೆ.

