ಅಮೆರಿಕದ ವರ್ಜೀನಿಯಾದಲ್ಲಿರುವ ಸೂಪರ್ ಮಾರ್ಕೆಟ್‌ನಲ್ಲಿ ಕಳೆದ 10 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಗುಜರಾತ್ ಮೂಲದ ಭಾರತೀಯ ಮಹಿಳೆಯೊಬ್ಬರನ್ನು ದರೋಡೆಗೆ ಯತ್ನಿಸಿದ ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಕೊಂದ ಘಟನೆ ನಡೆದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯ ಸಮುದಾಯದಲ್ಲಿ ಆಘಾತ ಮೂಡಿಸಿದೆ.
ಮೃತ ಮಹಿಳೆಯನ್ನು 45 ವರ್ಷದ ಮೇಘನಾಬೆನ್ ಪಟೇಲ್ ಎಂದು ಗುರುತಿಸಲಾಗಿದೆ. ಅವರು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ವಿಸ್ನಗರ್ ಪ್ರದೇಶದ ಜಂತ್ರಾಲ್ ಗ್ರಾಮದವರಾಗಿದ್ದು, ಅವರ ಪೋಷಕರು ಇನ್ನೂ ಅಲ್ಲಿಯೇ ವಾಸವಾಗಿದ್ದಾರೆ. ಮೇಘನಾಬೆನ್ ಅವರು ತಮ್ಮ ಪತಿ ಉಪೇಂದ್ರಭಾಯ್ ಪಟೇಲ್ ಮತ್ತು ಇಬ್ಬರು ಮಕ್ಕಳಾದ ಮಗಳು ನಕ್ಷಿಬೆನ್ ಮತ್ತು ಮಗ ಸ್ಮಿತ್ ಅವರೊಂದಿಗೆ ನೆಲೆಸಿದ್ದರು.
ಸಿಸಿಟಿವಿ ದೃಶ್ಯಾವಳಿಯಲ್ಲಿ ಏನಿದೆ ? ವೈರಲ್ ಆಗಿರುವ ಸಿಸಿಟಿವಿ ದೃಶ್ಯಗಳಲ್ಲಿ, ಮುಖ ಮುಚ್ಚಿಕೊಂಡಿರುವ ವ್ಯಕ್ತಿಯೊಬ್ಬ ಅಂಗಡಿಯೊಳಗೆ ಪ್ರವೇಶಿಸುವುದು ಕಾಣಿಸುತ್ತದೆ. ಅವನು ಕೌಂಟರ್ ಬಳಿ ಬಂದು ಮೇಘನಾಬೆನ್ ಅವರೊಂದಿಗೆ ಸ್ವಲ್ಪ ಹೊತ್ತು ಮಾತನಾಡುತ್ತಾನೆ. ಕ್ಷಣಾರ್ಧದಲ್ಲೇ, ಆ ವ್ಯಕ್ತಿ ತನ್ನ ಜೇಬಿನಿಂದ ಬಂದೂಕು ತೆಗೆದು ಹತ್ತಿರದಿಂದಲೇ ಗುಂಡು ಹಾರಿಸುತ್ತಾನೆ. ಗುಂಡೇಟು ತಗುಲಿದ ತಕ್ಷಣ ಮಹಿಳೆ ಕೆಳಗೆ ಬೀಳುತ್ತಾರೆ. ನಂತರ ದಾಳಿಕೋರನು ಕೌಂಟರ್ ಹಾರಿ ಬಂದು ಮತ್ತೆ ಗುಂಡು ಹಾರಿಸಿ ಪರಾರಿಯಾಗುತ್ತಾನೆ. ಈ ಸಂದರ್ಭದಲ್ಲಿ ಅಂಗಡಿಯಲ್ಲಿದ್ದ ವಸ್ತುಗಳು ಕೆಳಗೆ ಬಿದ್ದಿರುವುದು ದೃಶ್ಯಗಳಲ್ಲಿ ದಾಖಲಾಗಿದೆ.
ಪೊಲೀಸ್ ತನಿಖೆ: ಘಟನೆಯ ನಂತರ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸೀಲ್ ಮಾಡಿದ್ದಾರೆ. ಆರೋಪಿಯನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಇದು ಕೇವಲ ದರೋಡೆಗೆ ನಡೆದ ದಾಳಿಯೇ ಅಥವಾ ಬೇರೆ ಯಾವುದಾದರೂ ಉದ್ದೇಶವಿದೆಯೇ ಎಂಬುದನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ತನಿಖೆ ಪ್ರಗತಿಯಲ್ಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ: ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ, ನೆಟ್ಟಿಗರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ವಲಸಿಗರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಷ್ಟಪಟ್ಟು ದುಡಿಯುತ್ತಿದ್ದ ಮಹಿಳೆಗೆ ಇಂತಹ ಗತಿ ಬಂದಿದ್ದು ದುರದೃಷ್ಟಕರ ಎಂದು ಅನೇಕರು ಕಂಬನಿ ಮಿಡಿದಿದ್ದಾರೆ. ಅಮೆರಿಕದಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಅಪರಾಧಗಳ ಬಗ್ಗೆಯೂ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಪ್ರಸ್ತುತ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ. ಹೆಚ್ಚಿನ ವಿಚಾರಣೆ ಮತ್ತು ವಿಧಿವಿಜ್ಞಾನ ವರದಿಯ ನಂತರ ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.

