ಕಾರವಾರ: ಕಪ್ಪೆ ಚಿಪ್ಪು ಆಯ್ದುಕೊಳ್ಳಲು ಹೋಗಿದ್ದಾಗ ದುರಂತ ಸಂಭವಿಸಿ ಒಂದೇ ಕುಟುಂಬದ ಒಟ್ಟು 8 ಜನರು ಜಲಸಮಾಧಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಟ್ಟೆಹಕ್ಕಲು ನದಿಯಲ್ಲಿ ನಡೆದಿದೆ.
ಮೃತರೆಲ್ಲರೂ ಭಟ್ಕಳದ ಶಿರಾಲಿ ಮೂಲದವರು. ಕಪ್ಪೆ ಚಿಪ್ಪು ತೆಗೆಯಲು ತಟ್ಟೆಹಕ್ಕಲು ನದಿಗೆ ಒಟ್ಟು 14 ಜನರು ಹೋಗಿದ್ದರು. ಈ ವೇಳೆ ನದಿ ನೀರಿನಲ್ಲಿ ಇಬ್ಬರು ಮುಳುಗಿದ್ದಾರೆ. ಅವರನ್ನು ರಕ್ಷಿಸಲೆಂದು ಮತ್ತೊಬ್ಬರು ಹೋಗಿದ್ದಾರೆ. ಮೂವರು ನೀರಿನಲ್ಲಿ ಮುಳುಗಿರುವುದನ್ನು ಕಂಡು ಅವರನ್ನು ರಕ್ಷಿಸಲೆಂದು ಇನ್ನೊಬ್ಬರು ಹೀಗೆ ಒಬ್ಬರ ಹಿಂದೆ ಒಬ್ಬರು ಹೋಗಿ ಒಟ್ಟು 8 ಜನರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನೀರುಪಾಲಾಗಿರುವ ನಾಲ್ವರನ್ನು ರಕ್ಷಿಸಲಾಗಿದೆ. ನಾಪತ್ತೆಯಾಗಿರುವ ಇನ್ನಿಬ್ಬರಿಗಾಗಿ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ರಕ್ಷಿಸಿರುವ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈಗಾಗಲೇ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ 8 ಜನರ ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದು, ಶವಗಳನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. 8 ಜನರು ಜಲಸಮಾಧಿಯಾಗಿರುವ ಘಟನೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಂಕಾಳು ವೈದ್ಯ ತೀವ್ರ ಸಂತಾಪ ಸೂಚಿಸಿದ್ದಾರೆ.

