ಬೆಂಗಳೂರು : ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಓದಿನ ಜೊತೆಗೆ ಅರೆಕಾಲಿಕ ಕೆಲಸವನ್ನೂ ಮಾಡುತ್ತಿದ್ದಳು. ಹೋಟೆಲ್ ಮಾರಾಟಕ್ಕೆ ಸಂಬಂಧಿಸಿದಂತೆ ಬ್ರೋಕರ್ ಹೈನಾಸ್ ಎಂಬಾತನ ಪರಿಚಯವಾಗಿದೆ. ಹೋಟೆಲ್ ಮಾರಾಟದ ಸಂಭ್ರಮದಲ್ಲಿ ಪಾರ್ಟಿ ಮಾಡುವಂತೆ ಆರೋಪಿ ಹೋಟೆಲ್ ಮಾಲೀಕರಲ್ಲಿ ಕೇಳಿಕೊಂಡಿದ್ದನು.
ಮೇ 11ರಂದು ನಡೆದ ಪಾರ್ಟಿ ವೇಳೆ, ಸ್ನೇಹಿತರು ಊಟ ತರಲು ಹೊರಗೆ ಹೋದ ಸಮಯದಲ್ಲಿ, ಹೈನಾಸ್ ಎಂಬಾತ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸ್ನೇಹಿತರು ತಕ್ಷಣ ಬಂದು ಯುವತಿಯನ್ನು ರಕ್ಷಿಸಿದ್ದಾರೆ. ಆರೋಪಿ ಮದ್ಯದ ಬಾಟಲ್ ಹಿಡಿದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಯುವತಿ ದೂರು ನೀಡಲು ಮುಂದಾದಾಗ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ. ನಂತರದ ದಿನಗಳಲ್ಲಿ, ಆರೋಪಿಯ ಕುಮ್ಮಕ್ಕಿನಿಂದ ಅಪರಿಚಿತರು ಯುವತಿಯ ಸ್ನೇಹಿತರಾಗಿದ್ದ ಹೋಟೆಲ್ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹೈನಾಸ್ ಎಂಬಾತನಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಆರೋಪಿಯು ದೈಹಿಕ ಸಂಪರ್ಕವು ಯುವತಿಯ ಒಪ್ಪಿಗೆ ಮೇರೆಗೆ ನಡೆದಿದೆ ಎಂದು ಹೇಳಿಕೊಂಡಿದ್ದು, ತನಿಖೆ ಮುಂದುವರಿದಿದೆ. ಸತ್ಯಾಸತ್ಯತೆಯನ್ನು ಆಧರಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

