ಭೋಪಾಲ್: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ನಟಿ, ಮಾಡೆಲ್ ಟ್ವಿಶಾ ಶರ್ಮಾ ನಿಗೂಢ ಸಾವು ಪ್ರಕರಣದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಪತಿ ಸಮರ್ಥ್ ಸಿಂಗ್ ನನ್ನು ಕೊನೆಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಟ್ವಿಶಾ ಶರ್ಮಾ ಸಾವಿನ ಬೆನ್ನಲ್ಲೇ ಕಳೆದ 10 ದಿನಗಳಿಂದ ತಲೆಮರೆಸಿಕೊಂಡಿದ್ದ ಪತಿ ಸಮರ್ಥ್ ಸಿಂಗ್ ಇಂದು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದರು. ಇದಕ್ಕೂ ಮುನ್ನ ಆತನ ಸುಳಿವು ನೀಡಿದವರಿಗೆ 30 ಸಾವಿರ ನಗದು ಬಹುಮಾನ ನೀಡುವುದಾಗಿ ಭೋಪಾಲ್ ಪೊಲೀಸರು ಘೋಷಿಸಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಸಮರ್ಥ್ ಜಬಲ್ಪುರ ಸೆಷನ್ಸ್ ನ್ಯಾಯಾಲಯಕ್ಕೆ ಶರಣಾಗಲು ಬಂದಿದ್ದ.
ಈ ವೇಳೆ ಆತನನ್ನು ಪೊಲೀಸರು ಇಂದು ಸಂಜೆ ವಶಕ್ಕೆ ಪಡೆದಿದ್ದಾರೆ. ಗುರುವಾರವಷ್ಟೇ ಭೋಪಾಲ್ ಸೆಷನ್ಸ್ ನ್ಯಾಯಾಲಯವು ಸಮರ್ಥ್ ಸಿಂಗ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ತಕ್ಷಣವೇ ಶರಣಾಗುವಂತೆ ಖಡಕ್ ಸೂಚನೆ ನೀಡಿತ್ತು.
33 ವರ್ಷದ ಟ್ವಿಶಾ ಶರ್ಮಾ ಮೇ 12ರಂದು ಭೋಪಾಲ್ನಲ್ಲಿರುವ ತನ್ನ ಪತಿಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಮಗಳ ಸಾವಿನಿಂದ ಕಂಗಾಲಾಗಿರುವ ಟ್ವಿಶಾ ಕುಟುಂಬಸ್ಥರು, ಇದು ಕೇವಲ ಆತ್ಮಹತ್ಯೆಯಲ್ಲ, ಇದರ ಹಿಂದೆ ಪತಿ ಮತ್ತು ಅತ್ತೆಯ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪತಿ ಹಾಗೂ ಅತ್ತೆ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಾ, ಆಕೆಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂದು ಪೋಷಕರು ದೂರು ನೀಡಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಸಮರ್ಥ್ ಸಿಂಗ್ ಕುಟುಂಬಸ್ಥರು, ಟ್ವಿಶಾ ಮಾದಕ ವ್ಯಸನಕ್ಕೆ ಒಳಗಾಗಿದ್ದಳು, ಅದೇ ಆಕೆಯ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಸಾವಿನ ಹಿಂದೆ ಅನುಮಾನವಿರುವ ಕಾರಣ ಟ್ವಿಶಾ ಪೋಷಕರು ಮತ್ತೊಮ್ಮೆ ಮರಣೋತ್ತರ ಪರೀಕ್ಷೆಗೆ ಮನವಿ ಮಾಡಿದ್ದರು. ಮಧ್ಯಪ್ರದೇಶ ಹೈಕೋರ್ಟ್ ಮೃತದೇಹದ ಎರಡನೇ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡಿದೆ. ಮೊದಲ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅದು ಆತ್ಮಹತ್ಯೆ ಎಂದು ಉಲ್ಲೇಖಿಸಲಾಗಿದ್ದರೂ, ಕುಟುಂಬಸ್ಥರು ಅದನ್ನು ಒಪ್ಪಲು ಸಿದ್ಧರಿಲ್ಲ. ಅಲ್ಲದೇ ಆಕೆಯ ದೇಹದ ಭಾಅಗದಲ್ಲಿ ಕೆಲ ಗಾಯಗಳು ಇರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ. ಆದರೆ, ಟ್ವಿಶಾ ಅತ್ತೆ ಗಿರಿಬಾಲಾ ಸಿಂಗ್ ಪರ ವಕೀಲರು ಈ ಎರಡನೇ ಮರುಪರೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಗಾಂಭೀರತೆಯನ್ನು ಅರಿತ ಮಧ್ಯಪ್ರದೇಶ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಲು ಆದೇಶಿಸಿದೆ.

