19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹಂತದ 67ನೇ ಪಂದ್ಯ ಇಂದು ( ಮೇ 22 ) ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಆರಿಸಿಕೊಂಡಿದೆ.
ಇನ್ನು ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಗೆದ್ದರೆ ಎರಡನೇ ಸ್ಥಾನಕ್ಕೆ ಏರಿಕೆ ಕಾಣುವ ಸಾಧ್ಯತೆ ಇದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರನೇ ಸ್ಥಾನಕ್ಕೆ ಇಳಿಯುವ ಸಾಧ್ಯತೆಯೂ ಇದೆ. ಹೀಗಾಗಿ ಈ ಪಂದ್ಯದ ಫಲಿತಾಂಶ ಉಭಯ ತಂಡಗಳಿಗೆ ಅತಿ ಮುಖ್ಯದ್ದಾಗಿದ್ದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡಿರುವ ಸನ್ ರೈಸರ್ಸ್ ಹೈದರಾಬಾದ್ ಈ ಅಂತರದಿಂದ ಗೆದ್ದರೆ ಮಾತ್ರ ಆರ್ಸಿಬಿಯ ಹಾಗೆ 18 ಅಂಕ ಗಳಿಸಿ ನೆಟ್ ರನ್ ರೇಟ್ನಲ್ಲಿ ಆರ್ಸಿಬಿ ಹಿಂದಿಕ್ಕಿ ಅಂಕಿಪಟ್ಟಿಯಲ್ಲಿ ಆರ್ಸಿಬಿಗಿಂತ ಮೇಲೇರಿ ಕ್ವಾಲಿಫಯರ್ ಒಂದಕ್ಕೆ ಅರ್ಹತೆ ಪಡೆದುಕೊಳ್ಳಲಿದೆ.
ಹಾಗಿದ್ದರೆ ಸನ್ ರೈಸರ್ಸ್ ಹೈದರಾಬಾದ್ ಎಷ್ಟು ರನ್ಗಳ ಅಂತರದಿಂದ ಗೆದ್ದರೆ ಆರ್ಸಿಬಿಗಿಂತ ಹೆಚ್ಚು ರನ್ ರೇಟ್ ಪಡೆದು ಅಂಕಪಟ್ಟಿಯಲ್ಲಿ ಆರ್ಸಿಬಿಗಿಂತ ಉತ್ತಮ ಸ್ಥಾನಕ್ಕೇರಲಿದೆ ಎಂಬ ಮಾಹಿತಿ ಮುಂದಿದೆ.
* ಸನ್ ರೈಸರ್ಸ್ 180 ರನ್ ಕಲೆಹಾಕಿದರೆ 87 ರನ್ಗಳ ಅಂತರದಿಂದ ಗೆಲ್ಲಬೇಕು. ಆಗ ಹೈದರಾಬಾದ್ ರನ್ ರೇಟ್ 0.645 ಆಗಲಿದೆ ಹಾಗೂ ಆರ್ಸಬಿ ರನ್ ರೇಟ್ 0.637 ಆಗಲಿದೆ.
* ಹೈದರಾಬಾದ್ 200 ರನ್ ಗಳಿಸಿದರೆ ಆಗಲೂ ಸಹ 87 ರನ್ಗಳಿಂದ ಆರ್ಸಿಬಿಯನ್ನು ಮಣಿಸಬೇಕು. ಆಗ ಹೈದರಾಬಾದ್ 0.644 ನೆಟ್ ರನ್ರೇಟ್ ಆಗಲಿದ್ದು, ಬೆಂಗಳೂರಿನದ್ದು 0.642 ಆಗಲಿದೆ.
* ಹೈದರಾಬಾದ್ 220 ರನ್ ಬಾರಿಸಿದರೆ, 88 ರನ್ಗಳಿಂದ ಗೆಲ್ಲಬೇಕು. ಆಗ ಹೈದರಾಬಾದ್ ನೆಟ್ ರನ್ರೇಟ್ 0.646 ಆಗಲಿದೆ ಹಾಗೂ ಬೆಂಗಳೂರು ರನ್ರೇಟ್ 0.644 ಆಗಲಿದೆ.
* ಹೈದರಾಬಾದ್ 240 ರನ್ ಬಾರಿಸಿದರೆ 89 ರನ್ಗಳಿಂದ ಗೆಲ್ಲಬೇಕು. ಆಗ ಹೈದರಾಬಾದ್ ನೆಟ್ ರನ್ರೇಟ್ 0.649 ಆಗಲಿದೆ ಹಾಗೂ ಬೆಂಗಳೂರು ನೆಟ್ ರನ್ರೇಟ್ 0.645 ಆಗಲಿದೆ.

