ಬೆಳಗಾವಿ: 4,500 ಕೋಟಿ ರೂ ವಂಚನೆ ಆರೋಪದಡಿ ಬೆಳಗಾವಿ ಪೊಲೀಸರು ಶಿವಂ ಅಸೋಸಿಯೇಟ್ಸ್ ನ ಶಿವಾನಂದ ನೀಲವಣ್ಣವರ್ ಎಂಬಾತನನ್ನು ಬಂಧಿಸಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. ಈ ಹಗರಣದ ಬಗ್ಗೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಶಿವಂ ಅಸೋಸಿಯೇಟ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾಅತನಾಡಿದ್ದು, ಪ್ರಕರಣ ಸಿಐಡಿಗೆ ವಹಿಸಲಾಗಿದ್ದು, ತನಿಖೆ ಬಳಿಕ ಎಲ್ಲವೂ ಬಹಿರಂಗವಾಗಲಿದೆ ಎಂದಿದ್ದಾರೆ.
ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಐಡಿಗೆ ಒಪ್ಪಿಸಲಾಗಿದೆ. ಸಿಐಡಿ ಅಧಿಕಾರಿಗಳು ತಮ್ಮ ತನಿಖೆಯನ್ನು ಪೂರ್ಣಗೊಳಿಸಿ ವರದಿ ನೀಡಿದ ನಂತರವೇ ಈ ಹಗರಣದ ಸಂಪೂರ್ಣ ಸತ್ಯಾಸತ್ಯತೆ ಮತ್ತು ನಿಖರವಾದ ಮಾಹಿತಿ ಹೊರಬರಲಿದೆ ಎಂದರು.
ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ, ಇದು ಸಂಪೂರ್ಣವಾಗಿ ಸಾರ್ವಜನಿಕರ ಹಣಕಾಸು ವಂಚನೆಗೆ ಸಂಬಂಧಿಸಿದ ವಿಷಯವಾಗಿದೆ. ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಿ ಸಾರ್ವಜನಿಕರಿಗೆ ಮೋಸ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಅಥವಾ ಪ್ರೇರೇಪಣೆ ಇಲ್ಲ ಎಂದು ತಿಳಿಸಿದರು.
ಹೆಚ್ಚಿನ ಬಡ್ಡಿಯ ಆಮಿಷಕ್ಕೆ ಒಳಗಾಗಿ ಸಾರ್ವಜನಿಕರು ಕಷ್ಟಪಟ್ಟು ದುಡಿದ ಹಣವನ್ನು ಅನಧಿಕೃತ ಸಂಸ್ಥೆಗಳಲ್ಲಿ ಹೂಡಿಕೆ ಮಾಡಬಾರದು. ಹಣ ಹೂಡಿಕೆ ಮಾಡುವಾಗ ಸಾರ್ವಜನಿಕರು ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ಹೇಳಿದರು. ಯಾವುದೇ ಸಂಸ್ಥೆಗಳು ನಿಯಮಬಾಹಿರವಾಗಿ ಅತಿಯಾದ ಆಸೆ ತೋರಿಸಿದಾಗ ಸಾರ್ವಜನಿಕರು ಜಾಗರೂಕರಾಗಿರಬೇಕು. ಇಂತಹ ವಂಚನೆ ತಡೆಯಲು ಕಾನೂನು ಕ್ರಮದ ಜೊತೆಗೆ ಜನರ ಜಾಗೃತಿಯೂ ಮುಖ್ಯವಾಗಿದೆ ಎಂದು ತಿಳಿಸಿದರು.
ಪೆಟ್ರೋಲ್, ಡೀಸೆಲ್, ಸಿಎನ್ ಜಿ ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಚುನಾವಣೆಗಳು ಮುಗಿದ ತಕ್ಷಣವೇ ಕೇಂದ್ರ ಸರ್ಕಾರವು ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದು ಹೊಸದೇನಲ್ಲ, ಇದು ಅವರ ಹಳೆಯ ಚಾಳಿಯೇ ಆಗಿದೆ.ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರ ಬದುಕು ದುಸ್ತರವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆಗಳು ನಡೆಯುವ ಸಂದರ್ಭದಲ್ಲಿ ಮತದಾರರನ್ನು ಸೆಳೆಯಲು ಬೆಲೆಗಳನ್ನು ಸ್ಥಿರವಾಗಿಟ್ಟು, ಚುನಾವಣೆ ಮುಗಿಯುತ್ತಿದ್ದಂತೆಯೇ ಏಕಾಏಕಿ ದರ ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರದ ತೈಲ ಮತ್ತು ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯನ್ನು ಬಿಜೆಪಿಯವರು ಜಾಗತಿಕ ಬಿಕ್ಕಟ್ಟು ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಿರುವುದು ಸಂಪೂರ್ಣ ತಪ್ಪು ಮತ್ತು ಜನವಿರೋಧಿ ನೀತಿ ಎಂದು ಆಕ್ಷೇಪಿಸಿದ ಸಚಿವರು, ಹಿಂದೆ ಯುಪಿಎ ಆಡಳಿತಾವಧಿಯಲ್ಲಿ ಪೆಟ್ರೋಲ್ ದರ ಕೇವಲ 1 ರೂಪಾಯಿ ಹೆಚ್ಚಾದರೂ ದೇಶಾದ್ಯಂತ ಬೀದಿಗಿಳಿದು ದೊಡ್ಡ ಹಂಗಾಮಾ ಮಾಡುತ್ತಿದ್ದ ಇದೇ ಬಿಜೆಪಿ ನಾಯಕರು, ಇಂದು ತಾವೇ ನಿರಂತರವಾಗಿ ಬೆಲೆ ಏರಿಸುತ್ತಿದ್ದರೂ ಮೌನ ವಹಿಸಿರುವುದರ ಹಿಂದೆ ರಾಜಕೀಯ ಸ್ವಾರ್ಥ ಅಡಗಿದೆ. ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ನಾಯಕರು ಜನಸಾಮಾನ್ಯರ ಆರ್ಥಿಕ ಸಂಕಷ್ಟಗಳಿಗೆ ಸಂಪೂರ್ಣವಾಗಿ ಕುರುಡಾಗಿದ್ದಾರೆ. ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದವರ ಬದುಕು ದುಸ್ತರವಾಗಿದ್ದರೂ ಅದನ್ನು ಸಮರ್ಥಿಸಿಕೊಳ್ಳುವುದು ಅವರ ಜನವಿರೋಧಿ ಧೋರಣೆ ತೋರಿಸುತ್ತದೆ ಎಂದು ತಿಳಿಸಿದರು.

