ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ತುಂಗಭದ್ರಾ ಸೇತುವೆ ಬಳಿ ಶುಕ್ರವಾರ ಲಾರಿ ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸಿದ್ಧ ಹುಲಿಗಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರಿದ್ದ ಟ್ರ್ಯಾಕ್ಟರ್‌ಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಈ ಘಟನೆಗೆ ತೀವ್ರ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿಗಳ ಆರ್ಥಿಕ ಪರಿಹಾರವನ್ನು ಘೋಷಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯಶವಂತ ನಗರ ಮತ್ತು ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದ ಸುಮಾರು 19 ಭಕ್ತರು ಟ್ರ್ಯಾಕ್ಟರ್ ಮೂಲಕ ಕೊಪ್ಪಳದ ಹುಲಿಗಿ ಗ್ರಾಮದ ಪ್ರಸಿದ್ಧ ಹುಲಿಗಮ್ಮ ದೇವಸ್ಥಾನಕ್ಕೆ ಹರಕೆ ತೀರಿಸಲು ಮತ್ತು ದರ್ಶನ ಪಡೆಯಲು ಹೊರಟಿದ್ದರು.ರಾಷ್ಟ್ರೀಯ ಹೆದ್ದಾರಿ 50ರ ಹೊಸಪೇಟೆ-ಕೊಪ್ಪಳ ಗಡಿಯ ತುಂಗಭದ್ರಾ ಡ್ಯಾಂ ಸೇತುವೆ ಬಳಿ ಬರುತ್ತಿದ್ದಂತೆ, ವೇಗವಾಗಿ ಬಂದ ಲಾರಿಯೊಂದು ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಮೇಲಿಂದ ಕೆಳಗೆ ಉರುಳಿಬಿದ್ದಿದೆ. ತಲೆಕೆಳಗಾದ ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿ ಭಕ್ತರು ಕಿರುಚಾಡಿದ್ದಾರೆ.
ಅಪಘಾತದಲ್ಲಿ ಒಂದು ವರ್ಷದ ಮಗು ಭರತ್, ಗೌರಮ್ಮ (33), ಗೀತಾ (32), ಮಹಾಂತೇಶ್ (18), ಮಂಜಮ್ಮ (35), ಕೆಂಚಪ್ಪ (35) ಸೇರಿದಂತೆ ಒಟ್ಟು ಏಳು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಮೃತರೆಲ್ಲರೂ ಒಂದೇ ಕುಟುಂಬದ ಸಂಬಂಧಿಕರು ಹಾಗೂ ಬಡ ಕೂಲಿ ಕಾರ್ಮಿಕರು ಎಂದು ತಿಳಿದುಬಂದಿದೆ.ಅಪಘಾತದಲ್ಲಿ ಗಾಯಗೊಂಡಿರುವ ಉಳಿದ ಭಕ್ತರನ್ನು ತಕ್ಷಣವೇ ಹೊಸಪೇಟೆ ಮತ್ತು ಕೊಪ್ಪಳದ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಕೊಪ್ಪಳ ಎಸ್ಪಿ ರಾಮ್ ಎಲ್. ಅರಸಿದ್ಧಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಸಿಎಂ ಸಂತಾಪ ಮತ್ತು ಪರಿಹಾರ ಘೋಷಣೆ: ಕೊಪ್ಪಳದ ಹುಲಿಗೆಮ್ಮ ದೇವಾಲಯಕ್ಕೆ ಭಕ್ತಾದಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಒಂದು ತುಂಗಭದ್ರಾ ಸೇತುವೆಯ ಮೇಲಿಂದ ಕೆಳಗೆಬಿದ್ದ ಪರಿಣಾಮ ಚಿಕ್ಕ ಮಕ್ಕಳು ಸೇರಿದಂತೆ ಆರು ಮಂದಿ ದುರಂತ ಸಾವಿಗೀಡಾದ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ದುರ್ಘಟನೆಯ ಬಗ್ಗೆ ಸಂಸದರಾದ ತುಕಾರಾಂ ಅವರೊಂದಿಗೆ ಮಾತನಾಡಿ, ಮಾಹಿತಿ ಪಡೆದುಕೊಂಡಿದ್ದೇನೆ. ಮೃತರೆಲ್ಲರೂ ಬಡ ಕುಟುಂಬಕ್ಕೆ ಸೇರಿದವರು, ಈ ಸಾವುಗಳು ಅವರ ಕುಟುಂಬದವರನ್ನು ಮತ್ತಷ್ಟು ಕಷ್ಟಕ್ಕೆ ನೂಕುವ ಹಿನ್ನೆಲೆಯಲ್ಲಿ, ಮಾನವೀಯ ನೆಲೆಯಲ್ಲಿ ಮೃತರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ.

