ಇಂದಿನ ಸಮಾಜದಲ್ಲಿ ಕ್ರೆಡಿಟ್ ಕಾರ್ಡ್ ಎಂಬುದು ಒಂದು ಗೌರವದ ಸಂಕೇತವಾಗಿ ಮಾರ್ಪಟ್ಟಿದೆ. ಕೈಯಲ್ಲಿ ಬಿಡಿಗಾಸು ಇಲ್ಲದಿದ್ದರೂ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಖರೀದಿಸುವ ಶಕ್ತಿಯನ್ನು ಇದು ನೀಡುತ್ತದೆ. ಆದರೆ, ಈ ಸೌಲಭ್ಯವೇ ನಮ್ಮನ್ನು ವಿಲಾಸಿ ಜೀವನಕ್ಕೆ ಗುಲಾಮರನ್ನಾಗಿ ಮಾಡುತ್ತದೆ. ಅವಶ್ಯಕತೆ ಇಲ್ಲದಿದ್ದರೂ ಸಹ ಕೇವಲ ಕ್ರೆಡಿಟ್ ಕಾರ್ಡ್ ಇದೆ ಎಂಬ ಕಾರಣಕ್ಕೆ ಅನಗತ್ಯವಾಗಿ ಖರ್ಚು ಮಾಡುತ್ತೇವೆ.
ಇಂದಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಇಲ್ಲದವರು ಬಹಳ ಕಡಿಮೆ. ಬ್ಯಾಂಕ್ನಲ್ಲಿ ಖಾತೆ ಇದ್ದರೆ ಸಾಕು, ಉಚಿತವಾಗಿ ಕ್ರೆಡಿಟ್ ಕಾರ್ಡ್ ನೀಡುತ್ತೇವೆ ಎಂದು ನಮಗೆ ದಿನನಿತ್ಯ ಫೋನ್ ಕರೆಗಳು ಬರುತ್ತಲೇ ಇರುತ್ತವೆ. ಹಣವಿಲ್ಲದಿದ್ದರೂ ವಸ್ತುಗಳನ್ನು ಖರೀದಿಸುವ ಅವಕಾಶ ಇರುವುದರಿಂದ, ಅನೇಕರು ಕ್ರೆಡಿಟ್ ಕಾರ್ಡ್ ಅನ್ನು ವರವೆಂದು ಭಾವಿಸುತ್ತಾರೆ. ಆದರೆ, ಇದೇ ಸೌಲಭ್ಯವು ಒಂದು ಹಂತದಲ್ಲಿ ನಮ್ಮನ್ನು ಸಾಲದ ಸುಳಿಗೆ ತಳ್ಳುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ. ವಿಶೇಷವಾಗಿ ಕ್ರೆಡಿಟ್ ಕಾರ್ಡ್ ಬಿಲ್ನಲ್ಲಿರುವ “ಮಿನಿಮಮ್ ಡ್ಯೂ” (Minimum Due) ಎಂಬುದು ಒಂದು ದೊಡ್ಡ ಮಾಯಾಜಾಲ.
ಕನಿಷ್ಠ ಮೊತ್ತದ ಪಾವತಿಯ ಹಿಂದಿರುವ ಅಸಲಿ ಸತ್ಯ
ಅನೇಕರು ಕ್ರೆಡಿಟ್ ಕಾರ್ಡ್ ಬಿಲ್ ಬಂದಾಗ ಪೂರ್ಣ ಮೊತ್ತವನ್ನು ಪಾವತಿಸಲು ಸಾಧ್ಯವಾಗದೆ, ಕೇವಲ ಕನಿಷ್ಠ ಮೊತ್ತವನ್ನು ಪಾವತಿಸಿ ನಿಟ್ಟುಸಿರು ಬಿಡುತ್ತಾರೆ. “ಅಬ್ಬಾ! ಈ ತಿಂಗಳಿಗೆ ಇಷ್ಟು ಸಾಕು” ಎಂದು ನಿರಾಳವಾಗುತ್ತಾರೆ. ಆದರೆ ಅಸಲಿ ಅಪಾಯ ಇಲ್ಲಿಂದಲೇ ಶುರುವಾಗುತ್ತದೆ.
- ಹೆಚ್ಚಿನ ಬಡ್ಡಿ: ನೀವು ಪಾವತಿಸುವ ಕನಿಷ್ಠ ಮೊತ್ತವು ಕೇವಲ ಬಡ್ಡಿಗೆ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿನ ಮೊತ್ತಕ್ಕೆ ಸೀಮಿತವಾಗಿರುತ್ತದೆ. ಅಸಲು ಸಾಲ ಹಾಗೆಯೇ ಉಳಿಯುತ್ತದೆ.
- ಬಡ್ಡಿ ದರ: ಕ್ರೆಡಿಟ್ ಕಾರ್ಡ್ಗಳ ಮೇಲೆ ಬ್ಯಾಂಕುಗಳು ವಾರ್ಷಿಕ ಸುಮಾರು 30% ರಿಂದ 45% ವರೆಗೆ ಬಡ್ಡಿಯನ್ನು ವಿಧಿಸುತ್ತವೆ. ಇದು ಸಾಮಾನ್ಯ ಪರ್ಸನಲ್ ಲೋನ್ಗಳಿಗಿಂತ ಹತ್ತು ಪಟ್ಟು ಹೆಚ್ಚು.
- ಚಕ್ರಬಡ್ಡಿಯ ಸುಳಿ: ಕೇವಲ ಕನಿಷ್ಠ ಮೊತ್ತವನ್ನು ಪಾವತಿಸುತ್ತಾ ಹೋದರೆ, ನಿಮ್ಮ ಸಾಲವು ಚಕ್ರಬಡ್ಡಿಯಿಂದಾಗಿ ಬೆಟ್ಟದಂತೆ ಬೆಳೆಯುತ್ತದೆ. ಒಂದು ಹಂತದಲ್ಲಿ ಅದನ್ನು ತೀರಿಸಲು ಅಸಾಧ್ಯವಾಗಬಹುದು.
ಸಿಬಿಲ್ (CIBIL) ಸ್ಕೋರ್ ಮೇಲೆ ಪರಿಣಾಮ:
ಕನಿಷ್ಠ ಮೊತ್ತವನ್ನು ಮಾತ್ರ ಪಾವತಿಸುವುದು ನಿಮ್ಮ ಸಾಲದ ಹೊರೆಯನ್ನು ಹೆಚ್ಚಿಸುವುದಲ್ಲದೆ, ನಿಮ್ಮ ಸಿಬಿಲ್ ಸ್ಕೋರ್ ಅನ್ನು ಗಣನೀಯವಾಗಿ ಕುಸಿಯುವಂತೆ ಮಾಡುತ್ತದೆ. ಇದರಿಂದ ಭವಿಷ್ಯದಲ್ಲಿ ನಿಮಗೆ ಗೃಹ ಸಾಲ (Home Loan) ಅಥವಾ ವಾಹನ ಸಾಲ (Car Loan) ಬೇಕಾದಾಗ ಬ್ಯಾಂಕುಗಳು ಸಾಲ ನೀಡಲು ನಿರಾಕರಿಸಬಹುದು ಅಥವಾ ಹೆಚ್ಚಿನ ಬಡ್ಡಿ ವಿಧಿಸಬಹುದು.
ಇತರ ಪ್ರಮುಖ ಎಚ್ಚರಿಕೆಗಳು
- ಎಟಿಎಂ ಹಣ ವಿತ್ಡ್ರಾ: ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ಹಣ ಡ್ರಾ ಮಾಡುವುದು ಅತ್ಯಂತ ಅಪಾಯಕಾರಿ. ಹಣ ತೆಗೆದ ಕ್ಷಣದಿಂದಲೇ ಭಾರೀ ಬಡ್ಡಿ ಮತ್ತು ಹೆಚ್ಚುವರಿ ಶುಲ್ಕಗಳು ಅನ್ವಯವಾಗುತ್ತವೆ. ಇದಕ್ಕೆ ಇತರ ಖರೀದಿಗಳಿಗೆ ಸಿಗುವ 40-50 ದಿನಗಳ ಕಾಲಾವಕಾಶ ಇರುವುದಿಲ್ಲ.
- ಹೆಚ್ಚಿನ ಕಾರ್ಡ್ಗಳ ಬಳಕೆ: ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ಗಳನ್ನು ಹೊಂದುವುದು ಅನಗತ್ಯ. ನೀವು ಬಳಸದಿದ್ದರೂ ವಾರ್ಷಿಕ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಎಂಬುದು ಹರಿತವಾದ ಚಾಕುವಿನಂತೆ. ಅದನ್ನು ಸರಿಯಾಗಿ ಬಳಸಿದರೆ ಅನುಕೂಲ, ಇಲ್ಲದಿದ್ದರೆ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಅಸ್ತವ್ಯಸ್ತಗೊಳಿಸುತ್ತದೆ. ಯಾವಾಗಲೂ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಪೂರ್ಣವಾಗಿ ಪಾವತಿಸಲು ಪ್ರಯತ್ನಿಸಿ. ‘ಮಿನಿಮಮ್ ಡ್ಯೂ’ ಎಂಬ ಬಲೆಗೆ ಬೀಳಬೇಡಿ. ಅನಗತ್ಯ ಕ್ರೆಡಿಟ್ ಕಾರ್ಡ್ಗಳಿದ್ದರೆ ಬ್ಯಾಂಕ್ಗೆ ಹೋಗಿ ಎನ್ಒಸಿ (NOC) ಪಡೆದು ಅವುಗಳನ್ನು ಕ್ಲೋಸ್ ಮಾಡಿ. ಶಿಸ್ತುಬದ್ಧ ಖರ್ಚುಗಳೇ ನಿಮ್ಮನ್ನು ಆರ್ಥಿಕವಾಗಿ ಸದೃಢಗೊಳಿಸುತ್ತವೆ.

