ಮಂತ್ರಾಲಯ: ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಠದ ಬಳಿ ಕಾರ್ಮಿಕರಿಗಾಗಿ ನಿರ್ಮಿಸಿದ್ದ ಶೆಡ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಭಾರಿ ಅಗ್ನಿ ಅವಘಡ ಸಂಭವಿಸಿದೆ.
ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಮಂತ್ರಾಲಯದಲ್ಲಿ ಗುರುರಾಯರ ಮಠದ ಬಳಿ ನರಹರಿ ತೀರ್ಥ ವಸತಿ ಗೃಹದ ಸಮೀಪ ಕಾರ್ಮಿಕರಿಗಾಗಿ ನಿರ್ಮಿಸಲಾಗಿದ್ದ ಶೆಡ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಧಗ ಧಗನೆ ಹೊತ್ತಿ ಉರಿದಿದೆ.
ಶ್ರೀಮಠದಲ್ಲಿ ಟೈಲ್ಸ್ ಕೆಲಸಕ್ಕಾಗಿ ಉತ್ತರ ಪ್ರದೇಶದಿಂದ ಆಗಮಿಸಿರುವ 30ಕ್ಕೂ ಹೆಚ್ಚು ಕಾರ್ಮಿಕರಿಗಾಗಿ ಇಲ್ಲಿ ಶೆಡ್ ವ್ಯವಸ್ಥೆ ಮಾಡಲಾಗಿತ್ತು. ಶೆಡ್ ನಲ್ಲಿದ್ದ ನಾಲ್ಕು ಸಿಲಿಂದರ್ ಗಳ ಪೈಕಿ 3 ಸಿಲಿಂಡರ್ ಗಳು ಸ್ಫೋಟಗೊಂಡಿವೆ. ಬೆಂಕಿಯ ಕೆನ್ನಾಲಿಗೆಗೆ ಶೆಡ್ ಧಗ ಧಗನೆ ಹೊತ್ತಿ ಉರಿದಿದೆ.
ತಕ್ಷಣ ಎಚ್ಚೆತ್ತ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರ್ಮಿಕರ ಶೆಡ್ ನಲ್ಲಿ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸುಬುಧೇಂದ್ರ ತೀರ್ಥರು, ಶೆಡ್ ನಲ್ಲಿ ಸ್ಲಿಲಿಂಡರ್ ಗಳು ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ. ಪೊಲೀಸರು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಯಾವುದೇ ಹಾನಿ, ಪ್ರಾಣಾಪಾಯ ಸಂಭವಿಸಿಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

