ಬೆಳಗಾವಿ: ಎಸ್ಐಆರ್ ವಿವಾದಕ್ಕೆ ಸಂಬಂಧಿಸಿದಂತೆ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಡಾ. ರವಿ ಪಾಟೀಲ್ ಅವರಿಗೆ ಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ, ಬೆಳಗಾವಿ ವೀರಭದ್ರ ನಗರದ ಸುಮಾರು 198 ಮುಸ್ಲಿಂ ಮತದಾರರ ಹೆಸರುಗಳನ್ನು ಅಕ್ರಮವಾಗಿ ಅಳಿಸಲು ಯತ್ನಿಸಿದ ಆರೋಪದ ಮೇಲೆ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿತ್ತು.
ವಾರ್ಡ್ ನಂಬರ್ 12ರ ಬೂತ್ ಮಟ್ಟದ ಅಧಿಕಾರಿಯೊಬ್ಬರು (BLO) ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿತ್ತು. ನಕಲಿ ದಾಖಲೆ ಮತ್ತು ತಪ್ಪು ಮಾಹಿತಿ ಆಧರಿಸಿ ಫಾರ್ಮ್ ನಂ. 7ರ ಮೂಲಕ ಮತದಾರರ ಹೆಸರುಗಳನ್ನು ಕೈಬಿಡಲು ಯತ್ನಿಸಲಾಗಿದೆ ಎಂಬ ಆರೋಪ ರವಿ ಪಾಟೀಲ್ ಮೇಲಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧನ ಭೀತಿಯಲ್ಲಿದ್ದ ರವಿ ಪಾಟೀಲ್, ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರ್ ಕೆ.ಎನ್. ಡಾ. ರವಿ ಪಾಟೀಲ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜುರು ಮಾಡಿದ್ದಾರೆ.
50 ಸಾವಿರ ರೂಪಾಯಿ ಬಾಂಡ್ ಹಾಗೂ ಅಷ್ಟೇ ಮೊತ್ತದ ಒಬ್ಬರ ಜಾಮೀನುದಾರರೊಂದಿಗೆ ಜಾಮೀನು ಮಂಜೂರು ಮಾಡಲಾಗಿದೆ. ಅಲ್ಲದೇ ಸಾಕ್ಷ್ಯಗಳಿಗೆ ಬೆದರಿಕೆ ಹಾಕಬಾರದು, ತನಿಖಾಧಿಕಾರಿಗಳು ಕರೆದಾಗ ಹಾಜರಾಗಬೇಕು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ಜಾಮೀನು ಸಿಕ್ಕ ಬೆನ್ನಲ್ಲೇ ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಡಾ. ರವಿ ಪಾಟೀಲ್ ಅವರು ಪೊಲೀಸ್ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದಾರೆ.
ಎಸ್ಐಆರ್ ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿ ಪೇಚೆಗೆ ಸಿಲುಕಿದ ಯತ್ನಾಳ್: ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹ
ವಿಜಯಪುರ: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಗೊಂದಲಗಳು ಉದ್ಭವಿಸಿದ್ದು, ಎಸ್ ಐರ‍್ ವೇಳೆ ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ ಆರೋಪ ಕೇಳಿಬ್ವಂದಿದೆ. ಇದೇ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
ಇದರ ಮಧ್ಯೆ ವಿಜಯಪುರಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ , ಬದುಕಿರುವ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿ ಪೇಚೆಗೆ ಸಿಲುಕಿದ್ದಾರೆ. ಹೌದು ವಿಜಯಪುರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ತಾರಕ್ಕೇರಿದೆ.
ಮೃತಪಟ್ಟವರ ಹೆಸರು ಮತದಾರರ ಪಟ್ಟಿಯಲ್ಲಿದೆ ಎಂದು ಯತ್ನಾಳ್ ಆರೋಪಿಸಿದ್ದರು. ಸೆ.30ರಂದು 8 ಮತದಾರರ ಮರಣ ಪ್ರಮಾಣ ಪತ್ರ ಪ್ರದರ್ಶಿಸಿ ಶಾಸಕರು ಆರೋಪ ಮಾಡಿದ್ದರು. ಆದರೆ, ಇದೀಗ ಆ ಎಂಟು ಮತದಾರರು ಪ್ರತ್ಯಕ್ಷರಾಗಿದ್ದು, ನಾವು ಮೃತಪಟ್ಟಿಲ್ಲ, ಜೀವಂತವಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಮುಂದೆ ಹಾಜರಾಗಿದ್ದಾರೆ.
ನಮ್ಮ ಡೆತ್ ಸರ್ಟಿಫಿಕೇಟ್ ಶಾಸಕ ಯತ್ನಾಳ್‌ಗೆ ಹೇಗೆ ಸಿಕ್ಕಿತು? ಮತದಾರರ ಪಟ್ಟಿಯಿಂದ ಹೆಸರು ತೆಗೆಸಲು ಹುನ್ನಾರ ನಡೆದಿದೆ . ಜೀವಂತ ವ್ಯಕ್ತಿಗಳ ಮರಣ ಪತ್ರ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಪಾಲಿಕೆಯಿಂದ ನೀಡಿದ ಮರಣ ಪ್ರಮಾಣ ಪತ್ರ ನಕಲಿಯೋ? ಅಸಲಿಯೋ? ಪಾಲಿಕೆ ಸಿಬ್ಬಂದಿಯಿಂದಲೇ ಗೋಲ್ಮಾಲ್ ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಜೀವಂತ ವ್ಯಕ್ತಿಗಳ ಡೆತ್ ಸರ್ಟಿಫಿಕೇಟ್ ನೀಡಿದವರ ಪತ್ತೆಗೆ ಜಿಲ್ಲಾಧಿಕಾರಿಗಳು ಆಗ್ರಹಿಸಿದ್ದಾರೆ.

