ಕೋಲ್ಕತ್ತಾ: ಬಿಜೆಪಿ ನಾಯಕ ಪ್ರಸ್ತುತ ಪಶ್ಚಿಮ ಬಂಗಾಳ ನೂತನ ಮುಖ್ಯಮಂತ್ರಿಯಾಗಿರುವ ಸುವೇಂದು ಅಧಿಕಾರಿಯ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣ ಸಂಂಬಂಧ ನಿರಂತರ ತನಿಖೆ, ಡಿಜಿಟಲ್ ದತ್ತಾಂಶಗಳ ವಿಶ್ಲೇಷಣೆ ಮತ್ತು ಅಪರಾಧ ಸ್ಥಳದಲ್ಲಿ ಸಾಂದರ್ಭಿಕ ಸಾಕ್ಷ್ಯಗಳ ಕೂಲಂಕಷ ಪರೀಕ್ಷೆಯ ನಂತರ, ತನಿಖಾಧಿಕಾರಿಗಳು ಅಂತಿಮವಾಗಿ ಉತ್ತರ ಪ್ರದೇಶದ ಮೂವರನ್ನು ಬಂಧಿಸಿದ್ದಾರೆ.
ಬಂಧಿಸಿರುವ ಮೂವರನ್ನು ಈಗಾಗಲೇ ಕೋಲ್ಕತ್ತಾಕ್ಕೆ ಕರೆ ತರಲಾಗಿದೆ. ಮೂಲಗಳ ಪ್ರಕಾರ, ಈ ಮೂವರು ಶಂಕಿತರನ್ನು ಸೋಮವಾರ ಮುಂಜಾನೆ ಬಿಗಿ ಭದ್ರತೆಯಲ್ಲಿ ಭಬಾನಿ ಭವನಕ್ಕೆ ಕರೆತರಲಾಗಿದ್ದು, ವಿಚಾರಣೆ ಆರಂಭವಾಗಿದೆ.
ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಉತ್ತರ ಪ್ರದೇಶದಿಂದ ಮೂವರು ಶಂಕಿತರನ್ನು ಬಂಧಿಸಿ, ಭಬಾನಿ ಭವನಕ್ಕೆ ಕರೆತರಲಾಗಿದ್ದು, ಅವರ ವಿಚಾರಣೆ ಮುಂದುವರೆದಿದೆ. ಅಪರಾಧ ಸ್ಥಳದಿಂದ ಸಂಗ್ರಹಿಸಲಾದ ಎಲೆಕ್ಟ್ರಾನಿಕ್ ಸಾಕ್ಷ್ಯಗಳು ಮತ್ತು ಸಾಂದರ್ಭಿಕ ಸುಳಿವುಗಳ ಆಧಾರದ ಮೇಲೆ ಸಾಕಷ್ಟು ತನಿಖೆ ನಡೆಸಲಾಗಿದೆ ಎಂದಿದ್ದಾರೆ.
ಕೊಲೆಗೆ ಬಳಸಲಾದ ವಾಹನದ ಚಲನವಲನ ಪತ್ತೆ, ಬ್ಯಾಲಿ ಟೋಲ್ ಪ್ಲಾಜಾದಲ್ಲಿ ದಾಖಲಾಗಿರುವ ನಿರ್ದಿಷ್ಟ ಯುಪಿಐ ವಹಿವಾಟಿನಿಂದ ತನಿಖಾಧಿಕಾರಿಗಳಿಗೆ ನಿರ್ಣಾಯಕ ಸುಳಿವು ಲಭ್ಯವಾಗಿದೆ. ಈ ಡಿಜಿಟಲ್ ವಹಿವಾಟಿಗೆ ಸಂಬಂಧಿಸಿದ ದತ್ತಾಂಶ ವಿಶ್ಲೇಷಣೆಯು ಶಂಕಿತರ ಸುಳಿವು, ಪ್ರಯಾಣದ ಮಾದರಿಗಳು ಮತ್ತು ಸಂವಹನ ದಾಖಲೆಗಳ ಮಾಹಿತಿ ಮೇರೆಗೆ ಪಶ್ಚಿಮ ಬಂಗಾಳ ಪೊಲೀಸರ ವಿಶೇಷ ತನಿಖಾ ತಂಡ ಉತ್ತರ ಪ್ರದೇಶಕ್ಕೆ ತೆರಳಿ ಮೂವರು ಆರೋಪಿಗಳನ್ನು ಬಂಧಿಸಿದೆ.
ಸಿಸಿಟಿವಿ ದೃಶ್ಯಾವಳಿಗಳು, ವಾಹನ ಮಾರ್ಗ ನಕ್ಷೆಗಳು, ಮೊಬೈಲ್ ಟವರ್ ಸ್ಥಳಗಳು, ಟೋಲ್ ಪ್ಲಾಜಾ ಡೇಟಾ ಮತ್ತು ಹಣಕಾಸಿನ ವಹಿವಾಟು ದಾಖಲೆಗಳನ್ನು ಒಟ್ಟುಗೂಡಿಸುವ ಮೂಲಕ ತನಿಖಾಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್(41) ಅವರನ್ನು ದುಷ್ಕರ್ಮಿಗಳು ಕೋಲ್ಕತ್ತಾದ 24 ಪರಗಣ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು. ದಾಳಿಕೋರರು ಚಂದ್ರನಾಥ್ ರಥ್ ಅವರ ಕಾರನ್ನು ಹಿಂಬಾಲಿಸಿ, ಅಡ್ಡಗಟ್ಟಿ, ಎದುರು ಭಾಗದ ಕಿಟಕಿಯ ಮೂಲಕ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ರಥ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು.

