HomeLifestyleಕೈದಿ ಜೊತೆ ಜೈಲಾಧಿಕಾರಿ ಪ್ರೇಮಪಾಶ: ಅಡೆತಡೆಗಳ ಮೆಟ್ಟಿ ನಿಂತು ಹಸೆಮಣೆ ಏರಿದ ಅಪರೂಪದ ಜೋಡಿ

ಕೈದಿ ಜೊತೆ ಜೈಲಾಧಿಕಾರಿ ಪ್ರೇಮಪಾಶ: ಅಡೆತಡೆಗಳ ಮೆಟ್ಟಿ ನಿಂತು ಹಸೆಮಣೆ ಏರಿದ ಅಪರೂಪದ ಜೋಡಿ

ಸತ್ನ: ಪ್ರೀತಿ ಎಂಬುದು ಯಾವ ದೇಶ ಕಾಲ ಅಥವಾ ಗೋಡೆಗಳ ಹಂಗಿಲ್ಲದೆ ಚಿಗುರುತ್ತದೆ ಎಂಬುದಕ್ಕೆ ಮಧ್ಯಪ್ರದೇಶದ ಸತ್ನ ಕೇಂದ್ರ ಕಾರಾಗೃಹದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿಯೊಬ್ಬರು ಅಲ್ಲಿಯೇ ಶಿಕ್ಷೆ ಅನುಭವಿಸುತ್ತಿದ್ದ ಕೊಲೆ ಆರೋಪಿಯೊಂದಿಗೆ ಪ್ರೀತಿಯಲ್ಲಿ ಬಿದ್ದು, ಇದೀಗ ಎಲ್ಲ ಅಡೆತಡೆಗಳನ್ನು ಮೀರಿ ವಿವಾಹವಾಗಿದ್ದಾರೆ.

ಸತ್ನ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಅಧೀಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಫಿರೋಜಾ ಖಾತೂನ್ ಮತ್ತು ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಧರ್ಮೇಂದ್ರ ಸಿಂಗ್ ನಡುವೆ ಈ ಪ್ರೇಮಾಂಕುರವಾಗಿದೆ. 2007ರಲ್ಲಿ ನಡೆದ ಕೌನ್ಸಿಲರ್ ಒಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮೇಂದ್ರ ಸಿಂಗ್ ಜೈಲು ಸೇರಿದ್ದರು. ಜೈಲಿನಲ್ಲಿ ವಾರಂಟ್ ಇಂಚಾರ್ಜ್ ಆಗಿದ್ದ ಫಿರೋಜಾ ಅವರಿಗೆ ಧರ್ಮೇಂದ್ರ ಸಿಂಗ್ ಆಡಳಿತಾತ್ಮಕ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿದೆ.

ಸುಮಾರು 14 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಧರ್ಮೇಂದ್ರ ಸಿಂಗ್ ಅವರು ತಮ್ಮ ಉತ್ತಮ ನಡತೆಯ ಆಧಾರದ ಮೇಲೆ ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದರು. ಜೈಲಿನಿಂದ ಹೊರಬಂದ ನಂತರವೂ ಇವರ ಪ್ರೇಮ ಸಂಬಂಧ ಮುಂದುವರಿದಿದ್ದು, ಇತ್ತೀಚೆಗೆ ಛತ್ತರ್‌ಪುರ ಜಿಲ್ಲೆಯಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಅಂತರಧರ್ಮೀಯ ವಿವಾಹಕ್ಕೆ ಫಿರೋಜಾ ಖಾತೂನ್ ಅವರ ಕುಟುಂಬದ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕುಟುಂಬಸ್ಥರು ಮದುವೆಯಿಂದ ದೂರ ಉಳಿದಿದ್ದರು. ಇಂತಹ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಈ ಜೋಡಿಯ ನೆರವಿಗೆ ನಿಂತಿದ್ದಾರೆ. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ರಾಜಬಹದ್ದೂರ್ ಮಿಶ್ರಾ ಮತ್ತು ಅವರ ಪತ್ನಿ ಫಿರೋಜಾ ಅವರಿಗೆ ಪೋಷಕರ ಸ್ಥಾನದಲ್ಲಿ ನಿಂತು ಕನ್ಯಾದಾನ ನೆರವೇರಿಸುವ ಮೂಲಕ ಈ ವಿವಾಹವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ಸಾಮಾಜಿಕ ಸಂಘರ್ಷಗಳನ್ನು ತಪ್ಪಿಸುವ ಸಲುವಾಗಿ ವಿವಾಹದ ಆಮಂತ್ರಣ ಪತ್ರಿಕೆಯಲ್ಲಿ ಧರ್ಮೇಂದ್ರ ಸಿಂಗ್ ಅವರು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದರು ಎನ್ನಲಾಗಿದೆ. ಕಾನೂನು ಪಾಲಕ ಮತ್ತು ಕಾನೂನು ಉಲ್ಲಂಘಕನ ನಡುವಿನ ಈ ಅಪರೂಪದ ವಿವಾಹವು ಇದೀಗ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular