ಬೆಳಗಾವಿ: ರಣ ಬಿಸಿಲ ನಡುವೆ ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳು ಆಟವಾಡುವಾಗ ಬಿಸಿಲ ಝಳಕ್ಕೆ ಕಂಗೆಟ್ಟು ನೀರಿನಲ್ಲಿ ಈಜಲು ಹೋಗುವುದು ಸಾಮಾನ್ಯ. ಹೀಗೆ ಕಪಿಲೇಶ್ವರ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಬೆಳಗಾವಿಯ ಕಪಿಲೇಶ್ವರ ದೇಗುಲದ ಹೊಂಡದಲ್ಲಿ ಈ ದುರಂತ ಸಂಭವಿಸಿದೆ. ಬಾಲಕರಿಬ್ಬರು ಹೊಂಡದಲ್ಲಿ ಈಜಲು ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಇಬ್ಬರೂ ಮೃತಪಟ್ಟಿದ್ದಾರೆ.
ಮೃತ ಬಾಲಕರನ್ನು ಶಿವಾಜಿ ನಗರದ ನಿವಾಸಿ ಶಿವಂ ಪರಶುರಾಮ ಸುಂಡೀಕರ್ (7) ಮತ್ತು ಶಾಹಾಪುರದ ಜೇಡಗಲ್ಲಿ ನಿವಾಸಿ ಪರಶುರಾಮ ರಾಜು ನೀಲಜಕರ್ (11) ಎಂದು ಗುರುತಿಸಲಾಗಿದೆ. ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ, ಬಾಲಕರ ಮೃತದೇಹಗಳನ್ನು ಹೊಂಡದಿಂದ ಹೊರತೆಗೆದಿದೆ.
ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಖಡೇಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

