ನವದೆಹಲಿ: ದೇಶಾದ್ಯಂತ ಬಿಸಿಲಿನ ಬೇಗೆಗೆ ಬಳಲಿದ ಜನತೆಗೆ ಹವಾಮಾನ ಇಲಾಖೆಯಿಂದ ಶುಭ ಸುದ್ದಿ ಸಿಕ್ಕಿದೆ. ಈ ಬಾರಿ ಅವಧಿಗೆ ಮೊದಲೇ ನೈರುತ್ಯ ಮುಂಗಾರು ಮಾರುತ ಆಗಮಿಸಲಿದ್ದು, ಮೇ 14ರಿಂದ 16ರ ನಡುವೆ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಪ್ರವೇಶಿಸಲಿವೆ.
ಜೂನ್ 1ರ ಬದಲಾಗಿ ಮೇ ಕೊನೆಯ ವಾರದಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ದೇಶದ ಬಹುತೇಕ ಭಾಗಗಳಲ್ಲಿ ಮೇ ತಿಂಗಳಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಶಾನ್ಯ ಭಾರತ, ಕೇಂದ್ರ ಭಾರತ ಮತ್ತು ಪೂರ್ವ ಭಾರತದ ಹಲವು ಭಾಗಗಳಲ್ಲಿ ಮೇ ತಿಂಗಳ ಮಳೆ ವಾಡಿಕೆಯಷ್ಟು ಅಥವಾ ವಾಡಿಕೆಗಿಂತ ತಾಪಮಾನ ಕಡಿಮೆ ಇರುವ ಸಾಧ್ಯತೆ ಇದೆ. ಹಿಮಾಲಯದ ತಪ್ಪಲಿನಲ್ಲಿ ವಾಡಿಕೆಗಿಂತ ಅಧಿಕ ಮಟ್ಟದಲ್ಲಿ ಉಷ್ಣ ಮಾರುತ ಬೀಸಲಿದೆ. ದೇಶದ ಹಲವು ಭಾಗಗಳಲ್ಲಿ ಮೇ ತಿಂಗಳ ಉಷ್ಣಾಂಶ ವಾಡಿಕೆಗಿಂತಲೂ ಅಧಿಕ ಮಟ್ಟದಲ್ಲಿ ಮುಂದುವರೆಯಲಿದೆ ಎಂದು ಹೇಳಲಾಗಿದೆ.
ಪೆಸಿಫಿಕ್ ಸಾಗರದ ಮೇಲ್ಮೈ ನೀರು ಹೆಚ್ಚು ಬಿಸಿಯಾಗುವ ಪರಿಣಾಮ ಉಂಟಾಗುವ ಎಲ್ ನಿನೊ ಪರಿಸ್ಥಿತಿಯು ಮಾನ್ಸೂನ್ ಮಳೆಯ ಮೇಲೆ ಪ್ರಭಾವ ಬೀರಲಿದೆ. ಒಟ್ಟಾರೆ ಮುಂಗಾರು ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗಬಹುದು ಎನ್ನಲಾಗಿದೆ.

