ಬೆಂಗಳೂರು : ರಾಜಧಾನಿಯಲ್ಲಿ ಬುಧವಾರ ಸುರಿದ ಭೀಕರ ಮಳೆ ಮೃತ್ಯುರೂಪಿಯಾಗಿ ಅಪ್ಪಳಿಸಿದ್ದು, ಪ್ರತ್ಯೇಕ ಅವಘಡಗಳಲ್ಲಿ ಒಟ್ಟು 10 ಮಂದಿ ದುರ್ಮರಣಕ್ಕೀಡಾಗಿದ್ದಾರೆ.
ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಬಳಿ ಕಾಂಪೌಂಡ್ ಕುಸಿದು ಸಂಭವಿಸಿದ ಘೋರ ದುರಂತದಲ್ಲಿ ಅಮ್ಮನ ಕಣ್ಣೆದುರೇ 17 ವರ್ಷದ ಮಗ ವಿದ್ಯುತ್ ಸ್ಪರ್ಶದಿಂದ ಪ್ರಾಣ ಬಿಟ್ಟಿದ್ದು, ನಗರದ ಜನತೆಯನ್ನು ಕಣ್ಣೀರಿಡುವಂತೆ ಮಾಡಿದೆ. ಕಳೆದ 25 ವರ್ಷಗಳಲ್ಲೇ ದಾಖಲಾದ ಅತಿ ಹೆಚ್ಚು ಮಳೆ ಇದಾಗಿದ್ದು, ಸಿಲಿಕಾನ್ ಸಿಟಿಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 10 ಜನರು ಸಾವನ್ನಪ್ಪಿದ್ದಾರೆ.ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಶವಗಾರದ ಬಳಿ ಕಾಂಪೌಂಡ್ ಕುಸಿದು 7 ಜನರು ಮೃತಪಟ್ಟಿದ್ದಾರೆ.
ತಾಯಿಯ ಮುಂದೆಯೇ ಮಗನ ಸಾವು : ಕೆಜಿ ಹಳ್ಳಿಯ ವೆಂಕಟೇಶ್‌ಪುರಂ ನಿವಾಸಿ 17 ವರ್ಷದ ಸೈಯದ್ ಸೂಫಿಯಾನ್ ತನ್ನ ತಾಯಿಯೊಂದಿಗೆ ಬಟ್ಟೆ ಖರೀದಿಗೆ ಬಂದಿದ್ದಾಗ ಈ ದುರಂತ ಸಂಭವಿಸಿದೆ. ಬೌರಿಂಗ್ ಆಸ್ಪತ್ರೆ ಬಳಿ ಗಾಡಿ ಪಾರ್ಕ್ ಮಾಡುತ್ತಿದ್ದಾಗ, ಕಾಂಪೌಂಡ್ ಕುಸಿದು ಬೆಸ್ಕಾಂ ವಿದ್ಯುತ್ ತಂತಿ ತಗುಲಿದ ಪರಿಣಾಮ ಸೈಯದ್ ವಿದ್ಯುತ್ ಸ್ಪರ್ಶದಿಂದ ತಾಯಿಯ ಕಣ್ಣೆದುರೇ ಪ್ರಾಣ ಬಿಟ್ಟಿದ್ದಾನೆ. ಈ ಆಘಾತದಿಂದ ತಾಯಿ ಕೂಡ ಅಸ್ವಸ್ಥಗೊಂಡು ಐಸಿಯು ಸೇರಿದ್ದಾರೆ.
ಮೈಸೂರು ರಸ್ತೆಯ ಕಸ್ತೂರಿ ಬಾಯಿನಗರದಲ್ಲಿ ಮಂಜು (35) ಎಂಬುವವರ ಮೇಲೆ ಸಿಮೆಂಟ್ ಶೀಟ್ ಬಿದ್ದು ಸಾವನ್ನಪ್ಪಿದ್ದಾರೆ.ಜೆಪಿ ನಗರದ ಸಾರಕ್ಕಿ ಬಸ್ ನಿಲ್ದಾಣದ ಬಳಿ ರಘು (35) ಎಂಬುವವರು ವಿದ್ಯುತ್ ಕಂಬದ ಬಳಿ ನಿಂತಿದ್ದಾಗ ಕರೆಂಟ್ ಶಾಕ್ ತಗುಲಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಒಂದೇ ದಿನ 111 ಮಿ.ಮೀ ಮಳೆಯಾಗಿದ್ದು, ಇದು ಕಳೆದ 25 ವರ್ಷಗಳಲ್ಲಿ ದಾಖಲಾದ ಅತಿ ಹೆಚ್ಚಿನ ಮಳೆಯಾಗಿದೆ. ಈ ಹಿಂದೆ 2001ರಲ್ಲಿ 118 ಮಿ.ಮೀ ಮಳೆಯಾಗಿತ್ತು.ಬಿರುಗಾಳಿ ಸಹಿತ ಮಳೆಗೆ ಸುಮಾರು 170 ಮರಗಳು ಧರಾಶಾಹಿಯಾಗಿದ್ದು, 68 ಕಡೆಗಳಲ್ಲಿ ಜಲಾವೃತವಾಗಿದೆ.

