ಬೆಂಗಳೂರು: ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಹಮ್ಮದ್ ಶಾರಿಕ್ ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಎನ್ ಐಎ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
2022ರ ನವೆಂಬರ್ 19ರಂದು ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಎನ್ ಐಎ ವಿಶೇಷ ನ್ಯಾಯಾಲಯ ಇಂದು ಅಪರಾಧಿ ಮೊಹಮ್ಮದ್ ಶಾರಿಕ್ ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
2024ರ ಏಪ್ರಿಲ್ ನಲ್ಲಿ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಶಾರಿಕ್ ಹೇಳಿದ್ದ. ಬಳಿಕ ಕಳೆದ ಡಿಸೆಂಬರ್ ನಲ್ಲಿ ಶಾರಿಕ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ. ಆರೋಪಿ ತಪ್ಪೊಪ್ಪೊಕೊಂಡಿದ್ದಾಗಿ ಎನ್ ಐಎ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ಅನುಭವಿಸಿರುವ ಜೈಲು ಶಿಕ್ಷೆಯನ್ನು ಕಡಿತಗೊಳಿಸುವುದರೊಂದಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ 16 ಆರೋಪಿಗಳಲ್ಲಿ ಮೊಹಮ್ಮದ್ ಶಾರಿಕ್ ಅಪರಾಧಿಯಾಗಿದ್ದು, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಎನ್ ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ವೇಳೆ ಶಾರಿಕ್ ತಾನು ತಪ್ಪು ಒಪ್ಪಿಕೊಂಡಿದ್ದಾಗಿ ಹಾಗೂ ತನಗೆ ಮದುವೆಯಾಗಿ ಮನೆಯಲ್ಲಿ ಚಿಕ್ಕ ಮಗಳಿದ್ದಾಳೆ. ಮಗಳ ಪೋಷಣೆಯ ಜವಾಬ್ದಾರಿ ನನ್ನ ಮೇಲಿರುವುದರಿಂದ ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಮನವಿ ಮಾಡಿದ್ದ.
ಅಪರಾದಿ ಮನವಿ ಆಲಿಸಿದ ನ್ಯಾಯಾಲಯ ಮಾನವೀಯ ನೆಲೆಯಲ್ಲಿ 10 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದು, ಈಗಾಗಲೇ ಅಪರಾಧಿ ಅನುಭವಿಸಿರುವ 4 ವರ್ಷ ಜೈಲುವಾಸವನ್ನು ಪರಿಗಣಿಸಲಾಗಿದ್ದು, ಉಳಿದ 6 ವರ್ಷ ಜೈಲು ಶಿಕ್ಷೆ ನೀಡಲಾಗುವುದು ಎಂದು ಆದೇಶ ನೀಡಿದೆ.
2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ರೈಲ್ವೆ ನಿಲ್ದಾಣದ ಸಮೀಪವಿರುವ ನಾಗುರಿ ಎಂಬಲ್ಲಿ ಸಂಜೆ ಚಲಿಸುತ್ತಿದ್ದ ಆಟೋದಲ್ಲಿ ಭಾರಿ ಸದ್ದು ಕೇಳಿಬಂದಿತ್ತು. ಪರಿಶೀಲಿಸಿದಾಗ ಅದು ಕುಕರ್ ಬಾಂಬ್ ಸ್ಫೊತ ಎಂಬುದು ದೃಢವಾಗಿತ್ತು. ವ್ಯವಸ್ಥಿತವಾಗಿ ರೂಪಿಸಲಾಗಿದ್ದ ಐಇಡಿ ಬಾಂಬ್ ಸ್ಫೋಟವಾಗಿತ್ತು. ಘಟನೆಯಲ್ಲಿ ಆಟೋದಲ್ಲಿದ್ದ ಪ್ರಯಾಣಿಕ ಮೊಹಮ್ಮದ್ ಶಾರಿಕ್ ಮತ್ತು ಆಟೋ ಚಾಲಕ ಪುರುಷೋತ್ತಮ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದರು.
ಪೊಲೀಸರು ತನಿಖೆ ಆರಂಭಿಸಿದಾಗ ಆಟೋದಲ್ಲಿ ಸುಟ್ಟುಹೋಗಿದ್ದ ಪ್ರೆಶರ್ ಕುಕ್ಕರ್ ಪತ್ತೆಯಾಗಿತ್ತು. ಅದರೊಳಗೆ ಡಿಟೋನೇಟರ್, ಸರ್ಕ್ಯೂಟ್ ಮತ್ತು ಬ್ಯಾಟರಿಗಳನ್ನು ಅಳವಡಿಸಲಾಗಿತ್ತು. ಆತ್ಮಾಹುತಿ ಬಾಂಬ್ ಇದ್ದಾಗಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು. ಶಾರಿಕ್ ತನ್ನ ಬಳಿ ಹುಬ್ಬಳ್ಳಿಯ ‘ಪ್ರೇಮರಾಜ್’ ಎಂಬುವವರ ಹೆಸರಿನ ನಕಲಿ ಆಧಾರ್ ಕಾರ್ಡ್ ಇಟ್ಟುಕೊಂಡಿದ್ದನು, ಶಾರಿಕ್ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ಅಲ್ಲಿಯೇ ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಅಳವಡಿಸಿದ್ದನು. ಪ್ರಕರಣದ ಗಾಂಭೀರತೆ ಅರಿತ ಕೇಂದ್ರ ಸರ್ಕಾರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿತ್ತು.
ಶಾರಿಕ್ ಐಸಿಸ್ ಉಗ್ರ ಸಂಘಟನೆಯಿಂದ ಪ್ರೇರಿತನಾಗಿ ರಾಜ್ಯಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ. ಮಂಗಳೂರಿನ ಕದ್ರಿ ದೇವಸ್ಥಾನ ಅಥವಾ ಜನನಿಬಿಡ ಪ್ರದೇಶವೇ ಆತನ ಗುರಿಯಾಗಿತ್ತು ಎಂಬ ಶಂಕೆ ವ್ಯಕ್ತವಾಗಿತ್ತು. ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯವು ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ವಿಚಾರಣೆಯನ್ನು ಪೂರ್ಣಗೊಳಿಸಿ ಇಂದು ಅಪರಾಧಿ ಶಾರಿಕ್ ಗೆ ಕಠಿಣ ಜೈಲು ಶಿಕ್ಷೆ ವಿಧಿಸಿ ಅಂತಿಮ ತೀರ್ಪು ನೀಡಿದೆ.

