ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತ ಅರ್ಧ ಮುಕ್ತಾಯವಾಗಿದ್ದು, ಇಲ್ಲಿಯವರೆಗೂ ಯಾರಿಂದಲೂ ಸೋಲಿಸಲಾಗದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಂಜಾಬ್ ಕಿಂಗ್ಸ್ ಪಾತ್ರವಾಗಿದೆ.
ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿರುವ 7 ಪಂದ್ಯಗಳ ಪೈಕಿ ಆರರಲ್ಲಿ ಗೆದ್ದು ಉಳಿದೊಂದು ಪಂದ್ಯ ಮಳೆಯಿಂದ ರದ್ದಾದ ಕಾರಣ 13 ಅಂಕಗಳನ್ನು ಹೊಂದಿರುವ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಪ್ಲೇಆಫ್ ಪ್ರವೇಶಕ್ಕೆ ಇನ್ನೆರಡು ಪಂದ್ಯಗಳನ್ನು ಗೆದ್ದರೆ ಖಚಿತತೆ ಪಡೆದುಕೊಳ್ಳಲಿದೆ.
ಹೀಗೆ ಗೆಲುವಿನ ನಾಗಾಲೋಟವನ್ನು ಮುಂದುವರಿಸಿರುವ ಪಂಜಾಬ್ ಕಿಂಗ್ಸ್ ಮಾಲೀಕರಾದ ಪ್ರೀತಿ ಜಿಂಟಾ ಈ ನಡುವೆ ತಮ್ಮ ಎಕ್ಸ್ ಖಾತೆಯಲ್ಲಿ ತಮ್ಮ ಅನುಯಾಯಿಗಳ ಜತೆ ಪ್ರಶ್ನೋತ್ತರದ ಟ್ವೀಟ್ ಹಂಚಿಕೊಂಡಿದ್ದಾರೆ. ಹೀಗೆ ನಿಮಗೆ ಕೇಳಬೇಕೆನಿಸುವ ವಿಷಯದ ಕುರಿತು ಪ್ರಶ್ನೆ ಕೇಳಿ ಎಂದಿರುವ ಪ್ರೀತಿ ಜಿಂಟಾ ಟ್ವೀಟ್ಗೆ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಸ್ಪಿನ್ನರ್ ಯುಜ್ವೇಂದ್ರ ಚಹಲ್ ರಿಪ್ಲೇ ಮಾಡಿದ್ದು, ‘ಮೇಡಂ ಒಂದೇ ಒಂದು ಪಂದ್ಯದಲ್ಲಾದರೂ ಆರಂಭಿಕ ಆಟಗಾರನಾಗಿ ಆಡುವ ಅವಕಾಶ ಮಾಡಿಕೊಡಿ’ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರೀತಿ ಜಿಂಟಾ ‘ಖಂಡಿತವಾಗಿ ಯುಜಿ, ನಿನಗೋಸ್ಕರ ಏನು ಬೇಕಾದರೂ ಮಾಡುತ್ತೇನೆ. ಐಪಿಎಲ್ ಮುಗಿದ ಬಳಿಕ ನೀವು ಇಷ್ಟಪಡುವ ಪಂದ್ಯದಲ್ಲಿ ನೀನು ಆರಂಭಿಕನಾಗಬಹುದು. ಆಗ ಪ್ರಭ್ಸಿಮ್ರಾನ್ ಹಾಗೂ ಪ್ರಿಯನ್ಶ್ ಆರ್ಯ ಬೇಸರಗೊಳ್ಳುವುದಿಲ್ಲ’ ಎಂದು ನಕ್ಕಿದ್ದಾರೆ.

