ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಂಪುಟ ಸಭೆಯ ತೀರ್ಮಾನದ ಅನುಸಾರ ಒಳ ಮೀಸಲಾತಿ ಹಂಚಿಕೆ ಕುರಿತಂತೆ ಸೋಮವಾದ ಅಧಿಕೃತ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ.
ಪರಿಶಿಷ್ಟ ಜಾತಿಯ 101 ಉಪ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತಂತೆ ಕಳೆದ ಶುಕ್ರವಾರ ವಿಶೇಷ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟದ ನಿರ್ಣಯದಂತೆ ಸರ್ಕಾರ ಅಧಿಸೂಚನೆ ಹೊರಡಿಸಬೇಕಿದ್ದು, ನಂತರ ಮುಂದಿನ ಪ್ರಕ್ರಿಯೆ ಪ್ರಾರಂಭವಾಗಲಿದೆ. ಪ್ರಸ್ತುತ 56,432 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸರ್ಕಾರ ಹೇಳಿದ್ದು, ಒಳ ಮೀಸಲಾತಿ ಅಧಿಸೂಚನೆ ಪ್ರಕಟವಾಗುತ್ತಿದ್ದಂತೆ ಈ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
ಈ ನಡುವೆ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ಗ್ರೀನ್ ಸಿಗ್ನಲ್ ತೋರಿಸಿದ ಬೆನ್ನಲ್ಲೇ ರಾಜ್ಯದ ಪರಿಶಿಷ್ಟ ಎಡ ಸಮುದಾಯ ಹೊಸ ಬೇಡಿಕೆ ಈಡೇರಿಸಲು ಒತ್ತಾಯಿಸಿದೆ. ಒಳ ಮೀಸಲಾತಿ ಕೇವಲ ನೇಮಕಾತಿಯಲ್ಲಷ್ಟೇ ಅಲ್ಲದೆ ಆರ್ಥಿಕ ಸಬಲೀಕರಣ ಮತ್ತು ರಾಜಕೀಯ ಪ್ರಾತಿನಿಧ್ಯದಲ್ಲಿಯೂ ಇರಬೇಕೆಂದು ಒತ್ತಾಯಿಸಲಾಗಿದೆ. ತೆಲಂಗಾಣ, ಆಂಧ್ರಪ್ರದೇಶದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಒಳ ಮೀಸಲಾತಿ ಮಾದರಿಯನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.

