ಬೆಂಗಳೂರು: 21 ವರ್ಷದ ವಿದ್ಯಾರ್ಥಿನಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ ಆಕೆ ತಾಯಿಯಾಗುವಂತೆ ಮಾಡಿ ನಂತರ ದೂರ ಸರಿಯಲು ಯತ್ನಿಸಿದ್ದ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಪುತ್ರ ಕೃಷ್ಣ ಜೆ. ರಾವ್ ಗೆ ಹೈಕೋರ್ಟ್ ಚಾಟಿ ಬೀಸಿದೆ. ಆತನ ವರ್ತನೆಯ ಬಗ್ಗೆ ಹೈಕೋರ್ಟ್ ಕಿಡಿಕಾರಿದ್ದು ಸಂತ್ರಸ್ತೆ ಮತ್ತು ಆಕೆಯ ಮಗುವಿನ ಪೋಷಣೆಗೆ ಮಾಸಿಕ 75 ಸಾವಿರ ರೂ. ಪಾವತಿಸುವಂತೆ ನಿರ್ದೇಶಿಸಿದೆ.
ಆರೋಪಿ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದ್ದು, ಸಂತ್ರಸ್ತೆ ಮತ್ತು ಅವರ ಕುಟುಂಬದವರು, ಬಂಧುಗಳು ಈ ವಿಚಾರದ ಕುರಿತಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಲಾಗಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಆರೋಪಿ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿ, ಜೂನ್ 5ಕ್ಕೆ ವಿಚಾರಣೆ ಮುಂದೂಡಿದೆ.
ಸಂತ್ರಸ್ತೆ ಮತ್ತು ಮಗುವಿನ ಅಗತ್ಯತೆ ಪೂರೈಸಲು ಪ್ರತಿ ತಿಂಗಳು ಆರೋಪಿ 75 ಸಾವಿರ ರೂ. ಪಾವತಿಸಬೇಕು. ಮುಂದಿನ ಒಂದು ವಾರದೊಳಗೆ ಹಣ ಪಾವತಿಸಿ ನಂತರ ಪ್ರತಿ ತಿಂಗಳ ಹಣ ಪಾವತಿಸಬೇಕೆಂಬ ಷರತ್ತಿಗೆ ಒಳಪಟ್ಟು ಪ್ರಕರಣದ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ತಡೆ ನೀಡಲಾಗುತ್ತಿದೆ ಎಂದು ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ.
ಕೃಷ್ಣ ಜೆ. ರಾವ್ ಮಗುವಿನ ತಂದೆ ಎನ್ನುವುದು ಡಿಎನ್ಎ ಪರೀಕ್ಷೆಯಿಂದ ತಿಳಿದು ಬಂದಿದೆ. ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತೆಯ ಕುಟುಂಬಕ್ಕೆ ಆರೋಪಿ ಪರಿಹಾರ ನೀಡುವುದೇ ದಾರಿ. ಭವಿಷ್ಯ ನೋಡಬೇಕಿದ್ದ ಆಕೆ 20ನೇ ವಯಸ್ಸಿಗೆ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಯ ಕಷ್ಟಗಳು ನಿನಗೆ ತಿಳಿದಿಲ್ಲ. ಯುವತಿಯ ಭವಿಷ್ಯವನ್ನು ಆರೋಪಿ ಸಂಪೂರ್ಣವಾಗಿ ಕೊಂದಿದ್ದಾರೆ. ಈಗ ಆಕೆ ಏನು ಮಾಡುತ್ತಾಳೆ. ಬಡ ಕುಟುಂಬದಿಂದ ಬಂದವಳೆಂಬ ಕಾರಣಕ್ಕೆ ಹೀಗೆಲ್ಲ ಮಾಡಲು ಸಾಧ್ಯವಿಲ್ಲ. ಆರೋಪಿ ಪ್ರತಿ ತಿಂಗಳು 75 ಸಾವಿರ ರೂ. ಪಾವತಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

