ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಅರ್ಧದಷ್ಟು ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಇಲ್ಲಿಯವರೆಗೆ ಪಂಜಾಬ್, ಆರ್‌ಸಿಬಿ, ರಾಜಸ್ಥಾನ್ ತಂಡಗಳು ಒಳ್ಳೆಯ ಪ್ರದರ್ಶನ ನೀಡಿದ್ದರೆ, ಆರಂಭದಲ್ಲಿ ಮುಗ್ಗರಿಸಿದ್ದ ಹೈದರಾಬಾದ್ ಹಾಗೂ ಚೆನ್ನೈ ತಂಡಗಳು ಸುಧಾರಣೆ ಕಂಡಿವೆ.
ಆದರೆ ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮಾತ್ರ ಸತತ ಸೋಲಿನ ಪಯಣವನ್ನು ಮುಂದುವರಿಸಿವೆ. ಮುಂಬೈ ಇಂಡಿಯನ್ಸ್ ನಿನ್ನೆ ( ಏಪ್ರಿಲ್ 23 ) ತವರು ವಾಂಖೆಡೆ ್ಕ್ರಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 103 ರನ್‌ಗಳ ಹೀನಾಯ ಸೋಲನ್ನು ಕಾಣುವ ಮೂಲಕ ಟೂರ್ನಿಯಲ್ಲಿ ಐದನೇ ಪಂದ್ಯದಲ್ಲಿ ಪರಾಭವಗೊಂಡಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 208 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ 19 ಓವರ್‌ಗಳಲ್ಲಿ ಕೇವಲ 104 ರನ್‌ಗೆ ಆಲ್‌ಔಟ್ ಆಯಿತು.
ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ನೆಚ್ಚಿನ ತಂಡವನ್ನು ತವರಿನಲ್ಲೇ ಹೀನಾಯವಾಗಿ ಸೋಲಿಸುತ್ತಿದ್ದನ್ನು ಕಂಡ ಮುಂಬೈ ಅಭಿಮಾನಿಗಳು ಪಂದ್ಯ ಮುಗಿಯುವ ಮುನ್ನವೇ ಮೈದಾನದಿಂದ ಹೊರನಡೆಯಲು ಆರಂಭಿಸಿದ್ದರು. ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಮುಂಬೈ ಮಾಲೀಕ ಆಕಾಶ್ ಅಂಬಾನಿ ಸಹ ಪಂದ್ಯ ಮುಗಿಯುವುದಕ್ಕೂ ಮುನ್ನ ಮೈದಾನದಿಂದ ಹೊರನಡೆಯುತ್ತಿರುವ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೊದಲ್ಲಿ ಆಕಾಶ್ ಅಂಬಾನಿ ನೆರೆದಿದ್ದ ಮುಂಬೈ ಅಭಿಮಾನಿಗಳತ್ತ ನೋಡಿ ಎಲ್ಲರೂ ತೆರಳಿ ಎಂದು ಕೈ ಸನ್ನೆ ಮಾಡುತ್ತಿರುವುದು ಕಂಡುಬಂದಿದೆ. ತವರು ನೆಲದಲ್ಲಿ ಅಬ್ಬರಿಸಿ ಬೊಬ್ಬಿರಿದು ಎದುರಾಳಿಗಳಿಗೆ ನಡುಕ ಹುಟ್ಟಿಸಿ ಗೆಲುವು ಸಾಧಿಸುತ್ತಿದ್ದ ತಂಡದ ಪರಿಸ್ಥಿತಿ ಇಂದು ಇಂತಹ ಹೀನಾಯ ಮಟ್ಟಕ್ಕೆ ತಲುಪಿರುವುದನ್ನು ಕಂಡು ಮುಂಬೈ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ ಹಾಗೂ ತಂಡದಲ್ಲಿ ಬದಲಾವಣೆಗಳ ಅಗತ್ಯವಿದೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

