ಬೆಂಗಳೂರು: ಪಶು ವೈದ್ಯಾಧಿಕಾರಿಯೊಬ್ಬರ ಶೈಕ್ಷಣಿಕ ಪ್ರಮಾಣ ಪತ್ರಗಳ ಪರಿಶೀಲನಾ ವರದಿ ನೀಡಲು 10,000 ರೂ.ಗೆ ಬೇಡಿಕೆ ಇಟ್ಟು ಲಂಚ ಪಡೆಯುತ್ತಿದ್ದ ಎಸ್ಡಿಎ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹೆಬ್ಬಾಳದ ಪಶು ವೈದ್ಯಕೀಯ ಆಯುಕ್ತರ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ದ್ವಿತೀಯ ದರ್ಜೆ ಸಹಾಯಕನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮುದಾಸಿರ್ ಅಹಮದ್ ಬಂಧಿತ ಆರೋಪಿ.
ವಿಜಯಪುರದ ಪಶು ನಿರೀಕ್ಷಕ ಮಲ್ಲಿಕಾರ್ಜುನ್ ಶಂಕರ ನಿಡೋಣಿಯವರು ಶೈಕ್ಷಣಿಕ ಪ್ರಮಾಣ ಪತ್ರಗಳ ಪರಿಶೀಲನಾ ವರದಿಗಾಗಿ ಅರ್ಜಿ ಸಲ್ಲಿಸಿದ್ದು, ಅಂತಿಮ ವರದಿ ನೀಡಲು ಮುದಾಸಿರ್ ಅಹಮದ್ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಲ್ಲಿಕಾರ್ಜುನ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಮಲ್ಲಿಕಾರ್ಜುನ್ ಅವರಿಂದ ಮುದಾಸಿರ್ ಲಂಚ ಪಡೆದುಕೊಂಡ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

