ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಜಾರಿ ನಿರ್ದೇಶನಾಲಯ (ED) ಭಾರಿ ಕಾರ್ಯಾಚರಣೆ ನಡೆಸಿದೆ. ಶಾಂತಿನಗರ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಮತ್ತು ಅವರ ಪುತ್ರ, ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಅವರಿಗೆ ಇಡಿ ಅಧಿಕಾರಿಗಳು ಬಿಗಿ ಸಂಕಷ್ಟ ತಂದೊಡ್ಡಿದ್ದಾರೆ. ಬೆಂಗಳೂರಿನ ಒಟ್ಟು 17 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಜಾಲಾಡುತ್ತಿದ್ದಾರೆ.
17 ಕಡೆ ಏಕಕಾಲಕ್ಕೆ ದಾಳಿ: ಅಶೋಕ್ ನಗರದಲ್ಲಿರುವ ನಲಪಾಡ್ ನಿವಾಸ ಸೇರಿದಂತೆ ಬೆಂಗಳೂರಿನ ಹಲವೆಡೆ ಬೆಳಿಗ್ಗೆ 6 ಗಂಟೆಯಿಂದಲೇ ಶೋಧ ಕಾರ್ಯ ಆರಂಭವಾಗಿದೆ.
ಸುಮಾರು 12 ಮಂದಿ ಅಧಿಕಾರಿಗಳ ತಂಡ ರೈಡ್ ನಡೆಸುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಆರ್ಪಿಎಫ್ ಸಿಬ್ಬಂದಿಯಿಂದ ಭಾರಿ ಭದ್ರತೆ ಒದಗಿಸಲಾಗಿದೆ.
ಬಿಟ್ ಕಾಯಿನ್ ದಂಧೆ ನಂಟು?:
ಹ್ಯಾಕರ್ ಶ್ರೀಕಿ ಜೊತೆ ನಲಪಾಡ್ ಆರ್ಥಿಕ ವ್ಯವಹಾರ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಸುಮಾರು 6 ವರ್ಷಗಳ ಕಾಲ ಶ್ರೀಕಿ ಜೊತೆ ಸಂಪರ್ಕದಲ್ಲಿದ್ದ ನಲಪಾಡ್, ಅಂದಾಜು 4.5 ಕೋಟಿ ರೂ. ವಹಿವಾಟು ನಡೆಸಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಬಿಟ್ ಕಾಯಿನ್ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಇಡಿ ಅಧಿಕಾರಿಗಳು, ಹಣ ವರ್ಗಾವಣೆ (Money Laundering) ಆಯಾಮದಲ್ಲಿ ಈ ರೈಡ್ ಕೈಗೊಂಡಿದ್ದಾರೆ. ಹ್ಯಾರಿಸ್ ಹಾಗೂ ನಲಪಾಡ್ ಅವರ ಆರ್ಥಿಕ ವ್ಯವಹಾರಗಳ ದಾಖಲೆಗಳು ಬ್ಯಾಂಕ್ ಖಾತೆಗಳು ಮತ್ತು ಬಿಟ್ ಕಾಯಿನ್ ಹಗರಣದ ಆರೋಪಿಗಳೊಂದಿಗೆ ಇರುವ ಲಿಂಕ್ ಬಗ್ಗೆ ಅಧಿಕಾರಿಗಳು ಪ್ರಶ್ನಿಸುವ ಸಾಧ್ಯತೆ ಇದೆ.

