ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಅಖಾಡದಲ್ಲಿ ಹೈವೋಲ್ಟೇಜ್ ಪ್ರಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಸರಳತೆಯ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಸುಡುಬಿಸಿಲಿನ ಪ್ರಚಾರದ ನಡುವೆ ಸಣ್ಣ ವಿರಾಮ ಪಡೆದ ಮೋದಿ, ರಸ್ತೆ ಬದಿಯ ಸಣ್ಣ ಅಂಗಡಿಯೊಂದರಲ್ಲಿ ಬಂಗಾಳದ ಖ್ಯಾತ ಝಲ್ಮುರಿ(ಮಂಡಕ್ಕಿ ತಿಂಡಿ) ಸವಿದು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ.
ಜಾರ್ಗ್ರಾಮ್‌ನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ನಂತರ ಮೋದಿ ಅವರು ಹೆಲಿಕಾಪ್ಟರ್ ಕಡೆಗೆ ತೆರಳುತ್ತಿದ್ದರು. ದೇಶದ ಪ್ರಧಾನಿಯೇ ನೇರವಾಗಿ ಬಂದು ತಿಂಡಿ ಕೇಳಿದ್ದನ್ನು ಕಂಡು ವ್ಯಾಪಾರಿ ವಿಕ್ರಮ್ ಶಾ ಒಂದು ಕ್ಷಣ ದಂಗಾದರು. ನಂತರ ಅತ್ಯಂತ ಸಂಭ್ರಮದಿಂದ ಮೋದಿಯವರಿಗೆ ಬಿಸಿಬಿಸಿ ಝಲ್ಮುರಿ ಸವಿಯಲು ನೀಡಿದರು. ಸ್ವಲ್ಪ ಸಮಯ ಅಲ್ಲೇ ನಿಂತು ತಿಂಡಿ ಸವಿದ ಪ್ರಧಾನಿ ವ್ಯಾಪಾರಿಯ ಯೋಗಕ್ಷೇಮ ವಿಚಾರಿಸಿ ಕುಶಲೋಪರಿ ನಡೆಸಿದರು. ಅಷ್ಟೇ ಅಲ್ಲದೆ, ತಮಗಾಗಿ ಸಿದ್ಧಪಡಿಸಿದ ತಿಂಡಿಯನ್ನು ಸುತ್ತಮುತ್ತಲಿದ್ದ ಮಕ್ಕಳಿಗೂ ಹಂಚಿ ಸಂಭ್ರಮಿಸಿದರು.ಅಲ್ಲದೆ, ಅಂಗಡಿಕಾರ ಹಣ ಪಡೆಯಲು ನಿರಾಕರಿಸಿದರೂ, ಮೋದಿ ಅವರು ಒತ್ತಾಯಪೂರ್ವಕವಾಗಿ ಹಣ ನೀಡಿ ವೃತ್ತಿಪರತೆ ಮೆರೆದರು. ಬಿಗಿ ಭದ್ರತೆಯ ನಡುವೆಯೂ ಸಾಮಾನ್ಯರಂತೆ ಬೆರೆತ ಅವರ ಈ ಸರಳ ನಡೆ, ಈಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನ ಗೆದ್ದಿದೆ
ತಮಗಾಗಿ ತಯಾರಿಸಿದ ಝಲ್ಮುರಿಯನ್ನು ಅಲ್ಲಿದ್ದ ಪುಟ್ಟ ಮಕ್ಕಳಿಗೆ ಹಂಚಿದ ಪ್ರಧಾನಿ, ಸ್ಥಳೀಯ ಮಹಿಳೆಯರ ಯೋಗಕ್ಷೇಮವನ್ನೂ ವಿಚಾರಿಸಿದರು.ಕಳೆದ 10 ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ವಿಕ್ರಮ್ ಶಾಗೆ ದೇಶದ ಪ್ರಧಾನಿಯೇ ತಮ್ಮ ಅಂಗಡಿಗೆ ಬಂದದ್ದು ಜೀವನದ ಅವಿಸ್ಮರಣೀಯ ಕ್ಷಣವಾಗಿತ್ತು.
ಇದಕ್ಕೂ ಮುನ್ನ ನಡೆದ ‘ವಿಜಯ ಸಂಕಲ್ಪ ಸಭೆ’ಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತೃಣಮೂಲ ಕಾಂಗ್ರೆಸ್ (TMC) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬುಡಕಟ್ಟು ಸಮುದಾಯದ ಅಭಿವೃದ್ಧಿಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ ಎಂದು ಕಿಡಿಕಾರಿದರು.
ಬಂಗಾಳದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಅಕ್ರಮ ಭೂಕಬಳಿಕೆ ವಿಷಯಗಳನ್ನು ಪ್ರಸ್ತಾಪಿಸಿ ಬದಲಾವಣೆಗೆ ಕರೆ ನೀಡಿದರು.ಏಪ್ರಿಲ್ 23 ಮತ್ತು 29 ರಂದು ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.

