ಅಂತರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ಅನಿಶ್ಚಿತತೆಗಳಿದ್ದರೂ, ಭಾರತದ ಆರ್ಥಿಕತೆಯು ಕಳೆದ ಕೆಲವು ಸಮಯದಿಂದ ಸ್ಥಿರವಾಗಿ ಮುನ್ನುಗ್ಗುತ್ತಿರುವುದು ನಮಗೆಲ್ಲ ತಿಳಿದಿದೆ. ವಿಶ್ವಬ್ಯಾಂಕ್ ಸೇರಿದಂತೆ ಹಲವು ವರದಿಗಳು ಇದನ್ನೇ ಹೇಳುತ್ತಾ ಬಂದಿವೆ. ಕೊರೊನಾ ಅಲೆ, ರಷ್ಯಾ-ಉಕ್ರೇನ್ ಯುದ್ಧ, ಆರ್ಥಿಕ ಮಂದಗತಿ, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಇತ್ತೀಚಿನ ಇರಾನ್-ಇಸ್ರೇಲ್ ಸಂಘರ್ಷಗಳ ನಡುವೆಯೂ ಭಾರತದ ಆರ್ಥಿಕತೆಯ ಬಗ್ಗೆ ಜಗತ್ತು ಸಕಾರಾತ್ಮಕವಾಗಿತ್ತು.
ಕೆಲವು ಸಮಯದ ಹಿಂದೆ ಬ್ರಿಟನ್ ಅನ್ನು ಹಿಂದಿಕ್ಕಿ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿತ್ತು. ಮುಂದಿನ ಕೆಲವೇ ವರ್ಷಗಳಲ್ಲಿ ಜಪಾನ್ ಮತ್ತು ಜರ್ಮನಿಯನ್ನೂ ಭಾರತ ಮೀರಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಭಾರತವು ಮುನ್ನಡೆಯುವ ಬದಲು ಒಂದು ಸ್ಥಾನ ಕೆಳಕ್ಕೆ ಜಾರಿದೆ.
ಹೌದು, ದೇಶದ ಆರ್ಥಿಕತೆಯು ಸಂಕಷ್ಟಕ್ಕೆ ಸಿಲುಕಿದೆ. ಕಳೆದ ವರ್ಷಕ್ಕೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಬಿಡುಗಡೆ ಮಾಡಿರುವ ಹೊಸ ಅಂದಾಜಿನ ಪ್ರಕಾರ, ಜಿಡಿಪಿ ಶ್ರೇಯಾಂಕದಲ್ಲಿ ಭಾರತವು ಒಂದು ಸ್ಥಾನ ಕುಸಿದು ಆರನೇ ಸ್ಥಾನಕ್ಕೆ ತಲುಪಿದೆ. ಬ್ರಿಟನ್ ಮತ್ತೆ ಐದನೇ ಸ್ಥಾನವನ್ನು ಅಲಂಕರಿಸಿದೆ. ಐಎಂಎಫ್ ಈ ಅಂಕಿಅಂಶಗಳನ್ನು ಡಾಲರ್ ಮೌಲ್ಯದಲ್ಲಿ ಬಿಡುಗಡೆ ಮಾಡಿದೆ.
ಕುಸಿತಕ್ಕೆ ಕಾರಣಗಳೇನು ?
- ರೂಪಾಯಿ ಮೌಲ್ಯದ ಕುಸಿತ: ಡಾಲರ್ ಎದುರು ರೂಪಾಯಿ ಮೌಲ್ಯವು ಕಳೆದ ಕೆಲವು ಸಮಯದಿಂದ ಭಾರಿ ಕುಸಿತ ಕಂಡಿದೆ. ಇದು ಸಾರ್ವಕಾಲಿಕ ಕನಿಷ್ಠ ಮಟ್ಟವಾದ ₹95 ರ ಗಡಿಯನ್ನು ದಾಟಿದೆ. ಜಿಡಿಪಿ ಮೌಲ್ಯವನ್ನು ಡಾಲರ್‌ಗಳಲ್ಲಿ ಅಳೆಯುವುದರಿಂದ, ರೂಪಾಯಿ ಕುಸಿತವು ಭಾರತದ ಜಿಡಿಪಿ ಮೌಲ್ಯವನ್ನು ತಗ್ಗಿಸಿದೆ.
- ಮೂಲ ವರ್ಷದ ಬದಲಾವಣೆ: ಸರ್ಕಾರವು ಜಿಡಿಪಿ ಲೆಕ್ಕಾಚಾರದ ಮೂಲ ವರ್ಷವನ್ನು (Base Year) ಬದಲಾಯಿಸಿದೆ. ಇದು ಅಂಕಿಅಂಶಗಳನ್ನು ಹೆಚ್ಚು ನಿಖರವಾಗಿ ತೋರಿಸುವ ತಾಂತ್ರಿಕ ಪ್ರಕ್ರಿಯೆಯಾಗಿದ್ದರೂ, ಇದರ ಪರಿಣಾಮವಾಗಿ ನಾಮಿನಲ್ ಜಿಡಿಪಿ ಅಂಕಿಅಂಶಗಳು ಕಾಗದದ ಮೇಲೆ ಸ್ವಲ್ಪ ಕಡಿಮೆ ಕಂಡುಬರುತ್ತವೆ.
ಐಎಂಎಫ್ ಅಂದಾಜಿನ ಮುಖ್ಯಾಂಶಗಳು
- 2025 ರ ವೇಳೆಗೆ: ಭಾರತದ ಜಿಡಿಪಿ 3.92 ಟ್ರಿಲಿಯನ್ ಡಾಲರ್ ಆಗಿರಲಿದೆ ಎಂದು ಐಎಂಎಫ್ ಅಂದಾಜಿಸಿದೆ. ಇದೇ ಸಮಯದಲ್ಲಿ ಬ್ರಿಟನ್ 4 ಟ್ರಿಲಿಯನ್ ಡಾಲರ್ ಮತ್ತು ಜಪಾನ್ 4.44 ಟ್ರಿಲಿಯನ್ ಡಾಲರ್ ತಲುಪುವ ಸಾಧ್ಯತೆಯಿದೆ.
- ವಿಶ್ವದ ಅಗ್ರ ರಾಷ್ಟ್ರಗಳು: ಅಮೆರಿಕ 30.8 ಟ್ರಿಲಿಯನ್ ಡಾಲರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಚೀನಾ 19.6 ಟ್ರಿಲಿಯನ್ ಡಾಲರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಜರ್ಮನಿಯು ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮುಂದುವರಿದಿದೆ.
ಭವಿಷ್ಯದ ಭರವಸೆ : ಸದ್ಯದ ಪರಿಸ್ಥಿತಿ ಹೀಗಿದ್ದರೂ, 2031ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಐಎಂಎಫ್ ಭವಿಷ್ಯ ನುಡಿದಿದೆ. 2031 ರಲ್ಲಿ ಭಾರತದ ಜಿಡಿಪಿ 6.79 ಟ್ರಿಲಿಯನ್ ಡಾಲರ್ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಆ ಸಮಯದಲ್ಲಿ ಜಪಾನ್ ಮತ್ತು ಯುಕೆ ಜಿಡಿಪಿ 5 ಟ್ರಿಲಿಯನ್ ಡಾಲರ್ ಆಸುಪಾಸಿನಲ್ಲಿದ್ದರೆ, ಜರ್ಮನಿ 6.35 ಟ್ರಿಲಿಯನ್ ಡಾಲರ್ ತಲುಪಲಿದೆ. ಅಮೆರಿಕ ಮತ್ತು ಚೀನಾ ಕ್ರಮವಾಗಿ 39 ಮತ್ತು 27.5 ಟ್ರಿಲಿಯನ್ ಡಾಲರ್ ತಲುಪಲಿವೆ ಎಂದು ವರದಿ ತಿಳಿಸಿದೆ.

