ಬೆಂಗಳೂರು: ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಪಿಯುಸಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ನಿಗೂಢವಾಗಿ ನಾಪತ್ತೆಯಾಗಿ 75 ದಿನಗಳಾಗಿದ್ದು, ಇದುವರೆಗೂ ಯಾವುದೇ ಸುಳಿವು ದೊರೆತಿಲ್ಲ. ಅವರ ಪತ್ತೆ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಪೊಲೀಸ್ ಇಲಾಖೆ ಇಬ್ಬರು ವಿದ್ಯಾರ್ಥಿನಿಯರ ಪತ್ತೆಗಾಗಿ 10 ಜನರ ವಿಶೇಷ ತಂಡ ರಚಿಸಿದೆ. ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿದ್ದು ಯಾವುದೇ ಸುಳಿವು ದೊರೆತಿಲ್ಲ. ಇದು ಕುಟುಂಬದವರನ್ನು ಕಂಗಾಲಾಗುವಂತೆ ಮಾಡಿದೆ. ಇಬ್ಬರು ವಿದ್ಯಾರ್ಥಿನಿಯರಿಗಾಗಿ ಪೊಲೀಸ್ ತಂಡವೊಂದು ಕೇರಳದಲ್ಲಿ ಬೀಡುಬಿಟ್ಟು ಹುಡುಕಾಟ ನಡೆಸಿದೆ.
ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದರು. ದ್ವಿತೀಯ ಪಿಯುಸಿ ಓದುತ್ತಿದ್ದ ತನಿಷ್ಕಾ ಮತ್ತು ಆಕೆಯ ಜೂನಿಯರ್ ತೇಜಸ್ವಿನಿ ನಾಪತ್ತೆಯಾಗಿದ್ದು, ಇವರಿಗಾಗಿ ಮುಂಬೈ, ಚೆನ್ನೈ, ದೆಹಲಿ, ಕಾಶಿ, ಕೇರಳ, ಚಾಮರಾಜನಗರ, ಮೈಸೂರು, ಕೊಯಮತ್ತೂರು ಸೇರಿದಂತೆ ನೂರಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ವಿದ್ಯಾರ್ಥಿನಿಯರು ಫೋನ್ ಮತ್ತು ಎಟಿಎಂ ಕಾರ್ಡ್ ಬಳಸಿಲ್ಲ. ಸ್ನೇಹಿತರು ಮತ್ತು ಕುಟುಂಬದವರನ್ನು ಕೂಡ ಸಂಪರ್ಕಿಸಿಲ್ಲ. ಮಲೆಮಹದೇಶ್ವರ ಬೆಟ್ಟದವರೆಗೂ ಹೋಗಿರುವ ಸುಳಿವು ಸಿಕ್ಕಿದೆ. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದರು. ಅಲ್ಲಿಂದ ಎಲ್ಲಿಗೆ ಹೋಗಿದ್ದಾರೆ ಎನ್ನುವುದು ಗೊತ್ತಿಲ್ಲ. ಪೋಷಕರು ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ವಿದ್ಯಾರ್ಥಿನಿಯರು ಹುಡುಕಲು ಪೊಲೀಸರಿಗೆ ಒಂದು ವಾರ ಕಾಲಾವಕಾಶ ನೀಡಲಾಗಿತ್ತು. ಆದರೆ ತಿಂಗಳಾದರೂ ವಿದ್ಯಾರ್ಥಿನಿಯರ ಸುಳಿವು ಸಿಕ್ಕಿಲ್ಲ.

