ಬೆಂಗಳೂರು: ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ನೀಡುವ ಬಗ್ಗೆ ರೂಪಿಸಲಾದ ನೀತಿಯನ್ನು ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಧಾರವಾಡ ಪೀಠ ಬುಧವಾರ ನಿರ್ದೇಶನ ನೀಡಿದೆ.
ಗೆಜೆಟ್ ನಲ್ಲಿ ಪ್ರಕಟವಾಗಿದ್ದರೂ ಋತುಚಕ್ರದ ರಜೆ ನೀತಿಯನ್ನು ಹೋಟೆಲ್ ಗಳು ಮತ್ತು ಸಂಸ್ಥೆಗಳು ಜಾರಿಗೆ ತಂದಿಲ್ಲ. ಮಹಿಳಾ ನೌಕರರಿಗೆ ಮುಟ್ಟಿನ ಸಂದರ್ಭದಲ್ಲಿ ಒಂದು ದಿನ ವೇತನ ಸಹಿತ ರಜೆ ನೀಡುವ ನೀತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಬೆಳಗಾವಿ ಜಿಲ್ಲೆಯ ಹೋಟೆಲ್ ಉದ್ಯೋಗಿ ಚಂದ್ರವ್ವ ಹಣಮಂತ ಗೋಕಾವಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದಿಂದ ಈ ನಿರ್ದೇಶನ ನೀಡಲಾಗಿದೆ.

