ಬೆಂಗಳೂರು-ಫಾರ್ಮ್ 7 ಸಲ್ಲಿಸಿದವರ ವಿರುದ್ಧ ಎಫ್ಐಆರ್ ದಾಖಲಿಸುವುದನ್ನು ನಿಲ್ಲಿಸಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹಾಗೂ ಬಿಜೆಪಿ ನಾಯಕರು ಪೊಲೀಸ್ ಮಹಾ ನಿರ್ದೇಶಕರಿಗೆ ಆಗ್ರಹ ಮಾಡಿದ್ದಾರೆ.
ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರು, ಶಾಸಕರೊಂದಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಪೊಲೀಸ್ ಮಹಾ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆಡಳಿತದಲ್ಲೇ ಗೂಂಡಾಗಿರಿ ಮಾಡುತ್ತಿದೆ. ಫಾರ್ಮ್ 6, ಫಾರ್ಮ್ 7 ಎಲ್ಲವೂ ಸಂವಿಧಾನದತ್ತವಾಗಿ ನೀಡಿರುವ ಅರ್ಜಿಗಳು. ಫಾರ್ಮ್ 7 ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗದ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಫಾರ್ಮ್ 7 ನೀಡಿರುವವರನ್ನು ಬಂಧಿಸಬೇಕೆಂದು, ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಚುನಾವಣಾಧಿಕಾರಿ ಮೇಲೆ ಒತ್ತಡ ತಂದಿದ್ದಾರೆ. ಇದರಿಂದಾಗಿ ಪೊಲೀಸರು ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಎಲ್ಲ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದರು.
ಫಾರ್ಮ್ 7 ನೀಡುವುದು ನಮ್ಮ ಹಕ್ಕು. ಮತದಾರರ ದಾಖಲೆ ಸರಿ ಇದೆಯೋ, ಇಲ್ಲವೋ ಎಂಬುದನ್ನು ಚುನಾವಣಾ ಆಯೋಗ ತೀರ್ಮಾನಿಸುತ್ತದೆ. ಆದರೆ ಕಾಂಗ್ರೆಸ್ ಹೇಳಿದಂತೆ ಚುನಾವಣಾ ಆಯೋಗದ ಅಧಿಕಾರಿಗಳು ನಡೆಯಬೇಕು ಎನ್ನುವುದು ಸಂವಿಧಾನ ವಿರೋಧಿ. ಬಾಂಗ್ಲಾದೇಶದವರನ್ನು ಕರೆದುಕೊಂಡು ಬಂದು ಕೋಗಿಲು ಕ್ರಾಸ್ನ 15 ಎಕರೆ ಜಾಗದಲ್ಲಿ ಅವರು ನೆಲೆಸುವಂತೆ ಮಾಡಲಾಗಿತ್ತು. ಅವರಿಗೆ ಕನ್ನಡ ಕೂಡ ಗೊತ್ತಿಲ್ಲ. ಅಲ್ಲಿ ನೆಲೆಸಿದ್ದ 300 ಕ್ಕೂ ಅಧಿಕ ಕುಟುಂಬಗಳ ಜನರನ್ನು ಮತದಾರರ ಪಟ್ಟಿಗೆ ಸೇರಿಸಲು ಪ್ರಯತ್ನಿಸಲಾಗಿತ್ತು. ನಾವು ಇದರ ವಿರುದ್ಧ ಹೋರಾಟ ಮಾಡಿ, ಕೋರ್ಟ್ಗೆ ಹೋದ ನಂತರ ಅಂತಹ ಪ್ರಯತ್ನ ವಿಫಲವಾಯಿತು. ಅಕ್ರಮ ವಲಸಿಗರು ಎಂಬುದು ಜಗಜ್ಜಾಹೀರಾಯಿತು. ಅಂತಹ 10 ಲಕ್ಷ ಬಾಂಗ್ಲಾ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸಿದರೆ ಕಾಂಗ್ರೆಸ್ ಗೆಲ್ಲಲು ಅನುಕೂಲವಾಗುತ್ತದೆ. ಕೋಗಿಲು ಕ್ರಾಸ್ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಜಮೀರ್ ಅಹ್ಮದ್ ಖಾನ್ ಹಾಗೂ ಕೃಷ್ಣ ಬೈರೇಗೌಡ ಅವರು ಬಾಂಗ್ಲಾ ನಿವಾಸಿಗಳ ಪರವಾಗಿ ನಿಂತಿದ್ದರು. ಅವರಿಗೆ ಮನೆಗಳನ್ನು ನೀಡಲು ತೀರ್ಮಾನವಾಗಿತ್ತು. ನಂತರ ಆ ತೀರ್ಮಾನದಿಂದ ಹಿಂದೆ ಸರಿಯಲಾಯಿತು ಎಂದರು.
ಫಾರ್ಮ್ 7 ಮೂಲಕ ಬಾಂಗ್ಲಾ ದೇಶೀಯರ ಮತ ಕೈ ಬಿಟ್ಟು ಹೋಗುತ್ತಿದೆ. ಇದರಿಂದಾಗಿ ಕಾಂಗ್ರೆಸ್ಗೆ ಎಲ್ಲ ಕಡೆ ಸೋಲು ಭಯ ಉಂಟಾಗಿದೆ. ಅದಕ್ಕಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಎಲ್ಲ ಸಚಿವರು ಚುನಾವಣಾ ಆಯೋಗದ ಕಚೇರಿ ಮುಂಭಾಗ ಧರಣಿ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿದ್ದರು. ನಮ್ಮ ಧರಣಿಗೆ ಚುನಾವಣಾ ಆಯೋಗದ ಬೆದರಿದೆ ಎಂದಿದ್ದರು. ಈಗ ನಾವು ಧರಣಿ ಮಾಡಿಯೇ ಇಲ್ಲ ಎಂದು ಸುಳ್ಳು ಹೇಳುತ್ತಿದ್ದರು. ಪೊಲೀಸರಿಗೆ ಪ್ರಕರಣ ದಾಖಲಿಸಲು ಇಷ್ಟು ದಾಖಲೆಗಳು ಸಾಕಾಗುತ್ತದೆ. ನಾವು ಪ್ರತಿಭಟನೆ ಮಾಡಿ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ ಬಳಿಕ ಕಾಂಗ್ರೆಸ್ನಿಂದ ಧರಣಿ ಮಾಡಿಯೇ ಇಲ್ಲವೆಂಬ ಹೇಳಿಕೆ ನೀಡಲಾಗಿದೆ ಎಂದರು.
ಪೊಲೀಸರು ಪ್ರಕರಣ ದಾಖಲಿಸಿದರೂ ಬಿಜೆಪಿ ಕಾರ್ಯಕರ್ತರು ಜಗ್ಗುವುದಿಲ್ಲ. ಇದರಿಂದ ಹಿಂದೆ ಸರಿಯದೇ ಇದ್ದರೆ ಇನ್ನಷ್ಟು ತೀವ್ರವಾದ ಹೋರಾಟ ಮಾಡುತ್ತೇವೆ. ಫಾರ್ಮ್ 7 ನೀಡಲು ನಮಗೆ ಅಧಿಕಾರ ಇಲ್ಲವೆಂದರೆ ಅದನ್ನು ಯಾಕೆ ಹೀಗೆ ನೀಡಲಾಗುತ್ತಿದೆ? ಆನ್ಲೈನ್ನಲ್ಲಿ ಎಷ್ಟು ಬೇಕಾದರೂ ಆ ಅರ್ಜಿಗಳನ್ನು ಪ್ರಿಂಟ್ ಮಾಡಿಕೊಂಡು ಸಲ್ಲಿಸಬಹುದು. ದೇಶ ಕಟ್ಟುವ ಆರ್ಎಸ್ಎಸ್ನಿಂದ ಅರ್ಜಿ ಪ್ರಿಂಟ್ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಚುನಾವಣೆಯಲ್ಲಿ ಅಕ್ರಮ ಮಾಡಿದ ಮಾಜಿ ಪ್ರಧಾನಿ ಇಂದಿರಾಗಾಂಧಿ ನಂತರ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದರು. ಇಂತಹ ಪಕ್ಷ ನಮಗೆ ಚುನಾವಣೆ ಬಗ್ಗೆ ಪಾಠ ಮಾಡುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ, ಅವರು ಸತ್ತಾಗ ಅಂತ್ಯಸಂಸ್ಕಾರಕ್ಕೆ ಜಾಗ ನೀಡದವರು ಸಂವಿಧಾನದ ಬೋಧನೆ ಮಾಡುತ್ತಿದ್ದಾರೆ. ಈ ಸರ್ಕಾರ ಇನ್ನೂ ಒಂದು ವರ್ಷ ಮಾತ್ರ ಇರುತ್ತದೆ. ಪೊಲೀಸ್ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿದರೆ, ಮುಂದೆ ಅದಕ್ಕೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಮುಂದೆ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ಪೊಲೀಸ್ ಅಧಿಕಾರಿಗಳಿಗೆ ಲೆಕ್ಕಾ ಚುಕ್ತಾ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬರಗಾಲ ಅಧ್ಯಯನಕ್ಕೆ ಕೇಂದ್ರದ ತಂಡ
ಕೇಂದ್ರದ ತಂಡ ಬಂದಿದೆ
ಈಗ ಬರಗಾಲ ಅಧ್ಯಯನಕ್ಕೆ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಬಂದಿದೆ. ಕೇವಲ ಪರಿಶೀಲನೆ ಅಲ್ಲ. ಸರಿಯಾದ ಅಂಕಿ ಅಂಶಗಳನ್ನು ಅವರಿಗೆ ನೀಡಬೇಕು. ಮನಮೋಹನ್ ಸಿಂಗ್ ಸರ್ಕಾರಕ್ಕಿಂತ ದುಪ್ಪಟ್ಟು ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಡಿದೆ. ಕಾಂಗ್ರೆಸ್ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ. ಇನ್ನು ಬಿಜೆಪಿ ವತಿಯಿಂದ ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಪೊಡ್ಡಬಳ್ಳಾಪುರ, ಚಾಮರಾಜನಗರ, ಮಂಡ್ಯ ಮೊದಲಾದ ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿಶೀಲನೆ ಮಾಡಲಿದ್ದೇವೆ. ರೈತರು ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೂ ಭೇಟಿ ನೀಡುತ್ತೇವೆ ಎಂದರು.

